

ಧಾರವಾಡ: ಕರ್ನಾಟಕ ವಿಶ್ವ ವಿದ್ಯಾಲಯದಿಂದ ದೂರವಾಗಿದ್ದ ಮುಕ್ತ ಹಾಗೂ ದೂರ ಶಿಕ್ಷಣ (ಒಡಿಎಲ್) ಸೌಲಭ್ಯವನ್ನು ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ (2020-21)ದಿಂದ ಪ್ರಾರಂಭಿಸಲು ಕವಿವಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.
ಕವಿವಿ ದೂರ ಸಂಪರ್ಕ ಶಿಕ್ಷಣದಲ್ಲಿ ಕೆಲ ಅವ್ಯವಸ್ಥೆಗಳಿಂದ ಸುಮಾರು 30 ದೂರ ಶಿಕ್ಷಣ ಕೋರ್ಸ್ಗಳನ್ನು 2017ರಲ್ಲಿ ವಿಶ್ವ ವಿದ್ಯಾಲಯಗಳ ಅನುದಾನ ಆಯೋಗ (ಯುಜಿಸಿ) ಸ್ಥಗಿತಗೊಳಿಸಿತ್ತು.
2018ರಲ್ಲೇ ವಿವಿ ಹೊಸ ನಿಯಮದಂತೆ ಕೋರ್ಸ್ ಪ್ರಾರಂಭಿಸಲು ಅರ್ಜಿ ಸಲ್ಲಿಸಿತ್ತು. ಆದರೆ, ಯುಜಿಸಿ ಕೆಲ ಕಾರಣಗಳಿಂದ ಅರ್ಜಿ ತಿರಸ್ಕರಿಸಿತ್ತು. ಹೀಗಾಗಿ ಈಗ ವಿವಿ ಯುಜಿಸಿ ನಿಯಮದಂತೆ ಎಲ್ಲ ಸಿದ್ಧತೆ ಮಾಡಿಕೊಂಡು ಮತ್ತೊಮ್ಮೆ ಅರ್ಜಿ ಸಲ್ಲಿಸಿದೆ.
ಬಿಎ, ಬಿಕಾಂ, ಎಂಎ ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಇತಿಹಾಸ, ಕನ್ನಡ, ಇಂಗ್ಲಿಷ್, ಹಿಂದಿ, ರಾಜ್ಯಶಾಸ್ತ್ರ ಹಾಗೂ ಎಂಕಾಂ ಸ್ನಾತಕೋತ್ತರ ಕೋರ್ಸ್ಗಳನ್ನು ಪ್ರಾರಂಭಿಸಲು ಅನುಮತಿ ಕೋರಿದೆ. ಇದಲ್ಲದೆ ಅಗತ್ಯ ಸಿದ್ಧತೆಗೆ ಸಿಂಡಿಕೇಟ್ ಸದಸ್ಯರು ಸೇರಿ 15 ಜನರ ಕೋರ್ ಅಕಾಡೆಮಿಕ್ ಸಮಿತಿ ಸಹ ರಚಿಸಿದೆ.
*ಬದಲಾವಣೆ ಏನು: ದೂರ ಶಿಕ್ಷಣದಲ್ಲಿ ಯುಜಿಸಿ ಹೊಸ ನಿಯಮಗಳನ್ನು ಜಾರಿಗೆ ತಂದಿದ್ದಲ್ಲದೆ, ಎಲ್ಲವನ್ನೂ ಯುಜಿಸಿಯೇ ನಿರ್ವಹಿಸಲು ನಿರ್ಧರಿಸಿದೆ. ಮೊದಲಿನ ದಿನಗಳಲ್ಲಿ ಅಭ್ಯರ್ಥಿಗಳು ಪ್ರವೇಶ ಪಡೆದ ತಕ್ಷಣದಲ್ಲಿ ಕಲಿಕಾ ಸಾಮಗ್ರಿ ಹಾಗೂ ಪ್ರವೇಶ ಪತ್ರ ನೀಡಲಾಗುತ್ತಿತ್ತು. ಆದರೆ, ಒಡಿಎಲ್ ವ್ಯವಸ್ಥೆಯಲ್ಲಿ ಅಭ್ಯರ್ಥಿಗಳಿಗೆ ಪ್ರತ್ಯೇಕ ಕಟ್ಟಡ, ತರಗತಿಗಳನ್ನು ನಡೆಸುವುದು, ಆನ್ಲೈನ್ನಲ್ಲೂ ಕಲಿಕಾ ಸಾಮಗ್ರಿ ನೀಡುವುದು ಸೇರಿ ಹಲವು ಬದಲಾವಣೆ ಮಾಡಿದೆ.
ಅವ್ಯವಹಾರ ತಪ್ಪಿಸಲು ಅಂಕಪಟ್ಟಿಯಲ್ಲಿ ವಿದ್ಯಾರ್ಥಿಗಳ ಆಧಾರ್ ಸಂಖ್ಯೆ, ಭಾವಚಿತ್ರ, ನೋಂದಣಿ ಸಂಖ್ಯೆ ನಮೂದಿಸಲಾಗುತ್ತಿದೆ. ಇದಲ್ಲದೆ ಅಭ್ಯರ್ಥಿಗಳು ಕವಿವಿಯಲ್ಲೇ ಪ್ರವೇಶಾತಿ ಪಡೆಯಬೇಕು. ಖಾಸಗಿ ಹಾಗೂ ಅನ್ಅಫಿಲಿಯೇಟೆಡ್ ಕಾಲೇಜುಗಳಿಗೆ ಕಲಿಕಾ ಕೇಂದ್ರ ನೀಡುವಂತಿಲ್ಲ. ವಿವಿ ವ್ಯಾಪ್ತಿಯ ಜಿಲ್ಲೆಗಳಿಗೆ 1 ಕೇಂದ್ರ ಮಾತ್ರ ನೀಡುವಂತೆ ನಿಯಮ ರೂಪಿಸಿದೆ.
ಏಪ್ರಿಲ್, ಮೇ ತಿಂಗಳಲ್ಲಿ ಯುಜಿಸಿ ಕಮಿಟಿ ವಿವಿಗೆ ಭೇಟಿ ನೀಡಿ ಪರಿಶೀಲಿಸುವ ಸಾಧ್ಯತೆ ಇದೆ. ಒಪ್ಪಿಗೆ ನೀಡಿದಲ್ಲಿ, ಜುಲೈ ಅಥವಾ ಆಗಸ್ಟ್ನಿಂದ ಕೋರ್ಸ್ ಪ್ರಾರಂಭವಾಗಲಿದೆ.
ಮುಕ್ತ ಹಾಗೂ ದೂರ ಶಿಕ್ಷಣ ಪ್ರಾರಂಭಿಸಲು ಎಲ್ಲ ರೀತಿಯಲ್ಲಿ ಪ್ರಯತ್ನ ಮಾಡಲಾಗಿದೆ. ನಿರ್ದೇಶಕರು ಹಾಗೂ ಸಿಂಡಿಕೇಟ್ ಸದಸ್ಯರು ಈ ಕುರಿತು ದೆಹಲಿಗೆ ಸಹ ತೆರಳಿದ್ದರು. ಈ ಬಾರಿ ಯುಜಿಸಿ ಒಪ್ಪಿಗೆ ನೀಡುವ ಭರವಸೆ ಇದೆ. ಪ್ರೊ. ಸಿ.ಬಿ. ಹೊನ್ನುಸಿದ್ದಾರ್ಥ, ಕವಿವಿ ಕುಲಸಚಿವ