ದೂರದೃಷ್ಟಿ, ಪ್ರಾಮಾಣಿಕತೆಯಿಂದ ಯಶಸ್ಸು ನಿಶ್ಚಿತ

16sunti01
Published on

ಸುಂಟಿಕೊಪ್ಪ: ದೂರದೃಷ್ಟಿ ಸದ್ಭಾವನೆ ಮತ್ತು ಪ್ರಾಮಾಣಿಕತೆಯಿಂದ ನಮ್ಮ ನಮ್ಮ ಕ್ಷೇತ್ರಗಳಲ್ಲಿ ಕೆಲಸ ಮಾಡಿ ಜೀವನದಲ್ಲಿ ಯಶಸ್ಸು ಕಾಣಬೇಕು ಎಂದು ಸೋಮವಾರಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ.ಸುರೇಶ್ ಸಲಹೆ ನೀಡಿದರು.


ಕೊಡಗು ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ಮತ್ತು ಸಾಕ್ಷರತಾ ಇಲಾಖೆ ಹಾಗೂ ಗದ್ದೆಹಳ್ಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಣ ಮಕ್ಕಳಲ್ಲಿ ಲೋಕ ಜ್ಞಾನ ಸಂಸ್ಕೃತಿ ಸಂಸ್ಕಾರ ಕಲಿಸುವ ಅತ್ಯುತ್ತಮ ವೇದಿಕೆಯಾಗಿದ್ದು, ಪಾಲಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಪ್ರತಿಯೊಬ್ಬರೂ ತಮ್ಮ ತಮ್ಮ ಕೆಲಸಗಳಲ್ಲಿ ಒಳ್ಳೆಯ ಉದ್ದೇಶ ಮತ್ತು ಸದ್ಭಾವನೆಯಿಂದ ಕೆಲಸ ಮಾಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದ ಅವರು, ಜೀವನದಲ್ಲಿ ಪ್ರಾಮಾಣಿಕ ಪ್ರಯತ್ನಗಳು ಮುಖ್ಯ ಎಂದು ಹೇಳಿದರು.


ಪ್ರಾಸ್ತಾವಿಕ ನುಡಿಗಳನ್ನಾಡಿದ ಮಾಜಿ ಗ್ರಾ.ಪಂ. ಉಪಾಧ್ಯಕ್ಷ ಪಿ.ಆರ್.ಸುಕುಮಾರ್ ಶಾಲೆಗೆ 23 ವರ್ಷಗಳ ಇತಿಹಾಸವಿದೆ ಎಂದು ಹೇಳಿದರಲ್ಲದೆ, ಶಾಲೆಗೆ ಅವಶ್ಯಕವಾಗಿರುವ ಮೂಲ ಸೌಲಭ್ಯದ ಬಗ್ಗೆ ಬೇಡಿಕೆ ಸಲ್ಲಿಸಿದರು.
ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಗ್ರಾ.ಪಂ. ಅಧ್ಯಕ್ಷೆ ಶಿವಮ್ಮ ಮಹೇಶ್ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಶಾಲೆಯ ಸ್ಥಳ ದಾನಿಗಳಾದ ಪಟ್ಟೆಮನೆ ದಿವಂಗತ ಮಾದಯ್ಯನವರ ಪತ್ನಿ ಕಾವೇರಮ್ಮ ಹಾಗೂ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತ ಮುಖ್ಯ ಶಿಕ್ಷಕರಾದ ತಿಮ್ಮಪ್ಪ, ಮೇಟಿಲ್ಡ, ಮೀನಾಕ್ಷಿ ಹಾಗೂ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಬಲ್ಕೀಸ್ ಅವರನ್ನು ಫಲ ತಾಂಬೂಲ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯತು.

ಸ್ಯಾಂಡಲ್ ವುಡ್ ಕಾಫಿ ತೋಟ ಮಾಲೀಕರಾದ ಜಾವಿದ್, ಸುಂಟಿಕೊಪ್ಪ ಕ್ಲಸ್ಟರ್ ಅಧಿಕಾರಿ ಸೀಮಾ, ಗ್ರಾಮ ಪಂಚಾಯಿತಿ ಸದಸ್ಯರಾದ ಪಿ.ಆರ್.ಸುನೀಲ್‌ಕುಮಾರ್, ಪಿ.ಎಫ್.ಸಬಾಸ್ಟೀನ್, ರಫೀಕ್ ಖಾನ್, ನಾಗರತ್ನ ಸುರೇಶ್, ಗೀತಾ, ಗದ್ದೆಹಳ್ಳದ ಅಮ್ಮೆಟಿ ಯೂತ್ ಕ್ಲಬ್ ನ ಅಧ್ಯಕ್ಷ ರಶೀದ್, ಇಚ್ಚಾ ರಶೀದ್, ಗ್ರಾಮಸ್ಥರಾದ ಪುಷ್ಪೇಂದ್ರ, ಸಣ್ಣ ಶಾಲಾ ಮುಖ್ಯ ಶಿಕ್ಷಕಿ ಹೇಮಾಕುಮಾರಿ, ಸಹ ಶಿಕ್ಷಕರಾದ ಶೈಲಾ ಜಾಯ್, ಮೀನಾ ಕುಮಾರಿ, ಅನಿತಾ, ಉಷಾ ಕುಮಾರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net