ದುಸ್ಥಿತಿಯಲ್ಲಿ ಸಭಾಂಗಣದ ಛಾವಣಿ

16sor1 (1)
ಸೊರಬ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದ ಸಭಾಂಗಣದ ಮೇಲ್ಛಾವಣಿ.
Published on

ಸೊರಬ: ಪಟ್ಟಣದ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಸಭಾಂಗಣದ ಛಾವಣಿ ಸೋರುತ್ತಿದ್ದು, ಜನಪ್ರತಿನಿಧಿಗಳ ನಿರ್ಲಕ್ಷೃಕ್ಕೆ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಟ್ಟಣದ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಪ್ರಾರ್ಥನೆ, ಸಾಂಸ್ಕೃತಿಕ ಚಟುವಟಿಕೆ, ಸಭೆ ಸಮಾರಂಭ ಹಾಗೂ ಬಿಸಿಯೂಟ ಸೇರಿ ಹಲವು ಉಪಯುಕ್ತ ಕಾರ್ಯಕ್ರಮಗಳಿಗಾಗಿ ಸಭಾಂಗಣ ನಿರ್ಮಿಸಲಾಗಿದೆ. ಆದರೆ ಈಗ ಮೇಲ್ಛಾವಣಿಯ ಶೀಟ್‌ಗಳು ಒಡೆದು ಹಾಳಾಗಿದ್ದು, ವಿದ್ಯಾರ್ಥಿಗಳು ಮಳೆ, ಬಿಸಿಲಿನಲ್ಲಿಯೇ ಪ್ರಾರ್ಥನೆ, ಸಭೆ, ಸಮಾರಂಭ ನಡೆಸಬೇಕಿದೆ. ಮೇಲ್ಛಾವಣಿ ಯಾವಾಗ ಕುಸಿಯುತ್ತೋ ಎಂಬ ಭಯದಲ್ಲಿ ವಿದ್ಯಾರ್ಥಿಗಳಿದ್ದಾರೆ. ಶಾಲೆಯಲ್ಲಿ ಪ್ರತಿ ವರ್ಷ 400ಕ್ಕೂ ಹೆಚ್ಚಿನ ಮಕ್ಕಳು ಅಭ್ಯಾಸ ಮಾಡುತ್ತಾರೆ. ಇತ್ತೀಚೆಗೆ ದಾಖಲಾತಿಯೂ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸಭಾಂಗಣವನ್ನು ಮತ್ತಷ್ಟು ವಿಸ್ತರಿಸುವ ಅಗತ್ಯವಿದೆ. ಆದರೆ ಸಭಾಂಗಣ ಮೇಲ್ಛಾವಣಿ ಸೋರಿಕೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಈ ಶಾಲೆಗೆ ಮಕ್ಕಳನ್ನು ದಾಖಲಿಸಲು ಬರುವ ಪಾಲಕರು ಚಿಂದಿಯಾಗಿರುವ ಸಭಾಂಗಣದ ಮೇಲ್ಛಾವಣಿ ನೋಡಿ, ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯಕೊಟ್ಟ ಪ್ರತಿಷ್ಠಿತ ಶಾಲೆ ಪರಿಸ್ಥಿತಿ ಹೀಗಾಗಿದೆ ಎಂದು ಮಾತಾಡುವಂತಾಗಿದೆ. ಶಾಲೆಗೆ ಉತ್ತಮ ಫಲಿತಾಂಶ ಬಂದರೂ ಸರ್ಕಾರಿ ಶಾಲೆ ಎಂಬ ಕಾರಣಕ್ಕೆ ಹಾಗೂ ಇಲ್ಲಿನ ಅವ್ಯವಸ್ಥೆಯ ಕಾರಣಕ್ಕೆ ಪಾಲಕರು ಅಸಡ್ಡೆ ಮಾಡುತ್ತಿದ್ದಾರೆ. ಸಚಿವರು, ಜನಪ್ರತಿನಿಧಿಗಳು ಸರ್ಕಾರಿ ಶಾಲೆಗಳಲ್ಲಿ ಎಲ್ಲ ರೀತಿಯ ಸೌಲಭ್ಯ ನೀಡುತ್ತಿದ್ದೇವೆ, ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಎನ್ನುತ್ತಾರೆ. ಆದರೆ ಕಳೆದ ಐದಾರು ವರ್ಷದಿಂದ ಹಾಳಾಗಿರುವ ಮೇಲ್ಛಾವಣಿ ಬಗ್ಗೆ ಗಮನಹರಿಸಿಲ್ಲ ಎಂಬುದು ಪಾಲಕರ ಪ್ರಶ್ನೆ. ಪಟ್ಟಣದ ಹೃದಯ ಭಾಗದಲ್ಲಿರುವ ಈ ಸರ್ಕಾರಿ ಪ್ರೌಢಶಾಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳ ದಾಖಲಾತಿ ಆಗುತ್ತದೆ. ಪ್ರೌಢಶಾಲೆಗೆ ಶಿಕ್ಷಕರ ಪರಿಶ್ರಮದಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.82.85ರಷ್ಟು ಲಿತಾಂಶ ಬಂದಿದೆ. 15 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 45 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ 26 ದ್ವಿತೀಯ, ಓರ್ವ ತೃತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ. ಉತ್ತಮ ಫಲಿತಾಂಶ ಬರುವ ಈ ಶಾಲೆ 7 ದಶಕ ಪೂರೈಸಿದೆ. ಹೊಸ ಕಟ್ಟಡ ನಿರ್ಮಿಸಬೇಕಾದ ಅವಶ್ಯಕತೆಯಿದೆ. ಮೇಲ್ಛಾವಣಿ ಸಮಸ್ಯೆಯೇ ಇದುವರೆಗೆ ಬಗೆಹರಿದಿಲ್ಲ. ಇನ್ನು ನೂತನ ಕಟ್ಟಡ ಮಾತು ಅಸಾಧ್ಯ ಎಂಬುದು ಪಾಲಕರ ಅನಿಸಿಕೆ. ಶಿಕ್ಷಣ ಸಚಿವ, ಪುರಸಭೆ ಮಖ್ಯಾಧಿಕಾರಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.

ಸಭಾಂಗಣದ ಮೇಲ್ಛಾವಣಿಯಿಂದ ಮಕ್ಕಳಿಗೆ ಬಹಳಷ್ಟು ಅನನುಕೂಲವಾಗಿದೆ. ಕಳೆದ ಐದು ವರ್ಷದಿಂದ ಛಾವಣಿ ಮುರಿದು ಬಿಳುತ್ತಿದೆ. ಇದು ಶಾಲೆ ವ್ಯವಸ್ಥೆಗೆ ಕಪ್ಪುಚುಕ್ಕೆಯಾಗಿದೆ. ಇದರಿಂದ ಮಕ್ಕಳು ಒಂದೆಡೆ ಸೇರದಂತಾಗಿದೆ. ಛಾವಣೆ ಸರಿಪಡಿಸುವಂತೆ ಇಲಾಖೆ ಹಾಗೂ ಸಚಿವರ ಕಚೇರಿಗೆ ಮನವಿ ಸಲ್ಲಿಸಿದ್ದೇವೆ. ಸರಿಪಡಿಸುವ ಭರವಸೆ ನೀಡಿದ್ದಾರೆ. ಫಕೀರಪ್ಪ, ಸರ್ಕಾರಿ ಪ್ರೌಢಶಾಲೆ ಉಪ ಪ್ರಾಚಾರ್ಯ, ಸೊರಬ ಹಾಳಾಗಿರುವ ಮೇಲ್ಛಾವಣಿ ಸರಿಪಡಿಸುವಂತೆ ಹಿಂದಿನ ಹಾಗೂ ಇಂದಿನ ಸಚಿವರಿಗೆ ಹಲವು ಬಾರಿ ಮನವಿ ನೀಡಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಶಾಲೆಯ ವ್ಯವಸ್ಥೆಗೆ ಕೆಟ್ಟ ಹೆಸರು ಬರುವಂತಾಗಿದೆ. ಯುವರಾಜ್ ಕೊಡಕಣಿ, ಎಸ್‌ಡಿಎಂಸಿ ಅಧ್ಯಕ್ಷ ಶಾಲೆಯಲ್ಲಿ ವಿದ್ಯಾಭ್ಯಾಸಕ್ಕೆ ಉತ್ತಮ ವಾತಾವರಣವಿದೆ. ನನ್ನ ಸಹಪಾಠಿಗಳು ಸೇರಿ ಎಲ್ಲರೂ ಶಾಲೆಯ ಆಡಿಟೋರಿಯಂನಲ್ಲಿ ಬಿಸಿಯೂಟ ಹಾಗೂ ಅಭ್ಯಾಸ ಮಾಡಬೇಕು. ಆದರೆ ಮೇಲ್ಛಾವಣಿ ಮುರಿದು ಕಿಂಡಿಯಾದ ಹಿನ್ನೆಲೆಯಲ್ಲಿ ಬಿಸಿಲು ಮಳೆಯಿಂದ ತೊಂದರೆ ಆಗುತ್ತಿದೆ. ಅಲ್ಲದೆ ಛಾವಣಿಗಳು ಗಾಳಿಗೆ ಬೀಳುತ್ತಿವೆ. ಇದರಿಂದ ಭಯವಾಗುತ್ತದೆ. ಎಚ್.ಯು.ಶ್ರೀಧರ, 9ನೇ ತರಗತಿ ವಿದ್ಯಾರ್ಥಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net