

ಶಿರಸಿ: ಹತ್ತಾರು ಗ್ರಾಮಗಳಿಗೆ ಸಂಪರ್ಕ ಸಾಧನವಾಗಿರುವ ತಾಲೂಕಿನ ರಾಗಿಹೊಸಳ್ಳಿ- ಮುಂಡಗಾರ ಮಾರ್ಗದ ಸೇತುವೆ ಶಿಥಿಲಗೊಂಡಿದೆ. ತಡೆಗೋಡೆಯೂ ಇಲ್ಲದ ಈ ಸೇತುವೆ ಮೇಲಿನ ಸಂಚಾರ ಮಳೆಗಾಲದಲ್ಲಿ ಜನರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.
ತೀರಾ ಕುಗ್ರಾಮವಾದ ರಾಗಿಹೊಸಳ್ಳಿ- ಮುಂಡಗಾರ ಗ್ರಾಮ ಸಂರ್ಪಸುವ ಮಾರ್ಗ ಮಧ್ಯೆ ಈ ಸೇತುವೆ ಇದೆ. ಹಲವು ದಶಕಗಳ ಹಿಂದೆ ಮುಂಡಗಾರ ಹೊಳೆಗೆ ನಿರ್ವಿುಸಿದ್ದ ಈ ಸೇತುವೆ ಶಿಥಿಲಗೊಂಡಿದೆ. ಆಗಿನಿಂದಲೇ ಸ್ಥಳೀಯರು, ಹೊಳೆಗೆ ದೊಡ್ಡ ಸೇತುವೆ ನಿರ್ವಿುಸಿಕೊಡುವಂತೆ ಜನಪ್ರತಿನಿಧಿಗಳ ಮುಂದೆ ಅಹವಾಲು ಸಲ್ಲಿಸುತ್ತಲೇ ಬಂದಿದ್ದಾರೆ. ಆದರೆ, ಈವರೆಗೂ ಬೇಡಿಕೆ ಈಡೇರದೆ ಇರುವುದು ಅಸಮಾಧಾನಕ್ಕೆ ಕಾರಣವಾಗುತ್ತಿದೆ. ಆದರೆ, ಇದೀಗ ಸೇತುವೆ ಮತ್ತಷ್ಟು ಶಿಥಿಲವಾಗಿದ್ದು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ.
ರಾಗಿಹೊಸಳ್ಳಿಯಿಂದ ಮುಂಡಗಾರ, ಬೆಣಗಾಂವ, ದೇವನಳ್ಳಿ, ಮತ್ತಿಘಟ್ಟ, ಪ್ರಸಿದ್ಧ ಪ್ರವಾಸಿ ತಾಣ ಯಾಣ ಮುಂತಾದ ಊರುಗಳಿಗೆ ತೆರಳಲು ಹೆಚ್ಚಿನ ಜನ ಇದೇ ಮಾರ್ಗವನ್ನು ಅನುಸರಿಸುತ್ತಾರೆ. ಅದರಲ್ಲೂ ಬೆಣಗಾಂವ ಗ್ರಾಮದಲ್ಲೇ 60-70 ಕುಟುಂಬಗಳು ವಾಸಿಸುತ್ತವೆ. ಈ ಭಾಗದಲ್ಲಿ ಹೆಚ್ಚಾಗಿ ಕೂಲಿ ಕಾರ್ವಿುಕರೇ ನೆಲೆಸಿದ್ದಾರೆ. ಜೀರ್ಣಾವಸ್ಥೆ ತಲುಪಿರುವ ಸೇತುವೆ ಮೇಲೆ ಮಳೆಗಾಲದಲ್ಲಿ ಸಂಚರಿಸಲು ಜನರು ಭಯಗೊಳ್ಳುತ್ತಿದ್ದಾರೆ.
ರಕ್ಷಣೆ ಇಲ್ಲ: ಆತಂಕದ ಸಂಗತಿಯೆಂದರೆ ಸೇತುವೆಗೆ ತಡೆಗೋಡೆಯೇ ಇಲ್ಲ. ಅದರಲ್ಲೂ ಮಳೆಗಾಲದಲ್ಲಿ ಹೊಳೆ ತುಂಬಿ ಹರಿಯುತ್ತಿದ್ದರೆ ಸೇತುವೆ ದಾಟಲು ಕಷ್ಟಸಾಧ್ಯ. 3 ಅಡಿ ಅಗಲ, 60 ಅಡಿ ಉದ್ದದ ಸೇತುವೆಯಲ್ಲಿ ಚಿಕ್ಕ ವಾಹನಗಳನ್ನೂ ದಾಟಿಸುವುದು ಹರಸಾಹಸವೇ ಸರಿ. ಸ್ವಲ್ಪ ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವಂತಿದೆ. ಹೀಗಾಗಿ, ದಿನಸಿ, ರೇಷನ್ ಸೇರಿ ಅಗತ್ಯ ವಸ್ತುಗಳಿಗಾಗಿ ರಾಗಿಹೊಸಳ್ಳಿಗೆ ಬರಲು ಆರೆಂಟು ಕಿಮೀ ದೂರ ನಡೆದುಕೊಂಡು ಬರಬೇಕಾದ ಸ್ಥಿತಿ ಈ ಭಾಗದ ಜನರದ್ದಾಗಿದೆ. ಅಲ್ಲದೆ, ಆರೋಗ್ಯ ಕೆಟ್ಟರಂತೂ ಬರಲು ಹರಸಾಹಸಪಡುವ ಪಡಬೇಕಿದೆ.
ಬಿದ್ದು ಹೋಗುವ ಆತಂಕ: ಸೇತುವೆಯ ಕಂಬಗಳ ಅಡಿಪಾಯದಲ್ಲಿ ಶಿಥಿಲತೆ ಗೋಚರವಾಗುತ್ತಿದೆ. ಸ್ಲಾ್ಯಬ್ಗಳು ಅಜೀರ್ಣಗೊಂಡಿವೆ. ಹೀಗಿರುವಾಗ, ಕಳೆದ ಬಾರಿಯಂತೆ ಈ ಬಾರಿಯೂ ಅತಿಯಾದ ಮಳೆಯಾಗಿ ಹೊಳೆ ತುಂಬಿ ಹರಿದರೆ ಸೇತುವೆ ಕೊಚ್ಚಿಹೋಗುವ ಆತಂಕ ಮೂಡಿದೆ. ಹೀಗಾಗಿ, ಸಂಬಂಧಿಸಿದ ಇಲಾಖೆಗಳು ಇನ್ನಾದರೂ ಎಚ್ಚೆತ್ತುಕೊಂಡು ಈ ಹಳ್ಳಿಗಳ ಸಂಪರ್ಕಕ್ಕೆ ದೊಡ್ಡ ಸೇತುವೆ ನಿರ್ವಣಕ್ಕೆ ಪೂರಕ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸುತ್ತಾರೆ.
ಈ ಹಿಂದೆ ನಿರ್ವಿುಸಿದ ಸೇತುವೆ ಅವೈಜ್ಞಾನಿಕವಾಗಿದೆ. ತಡೆಗೋಡೆ, ಸೇತುವೆಯ ಮೇಲ್ಭಾಗದಲ್ಲಿ ರಕ್ಷಣಾ ಪಟ್ಟಿಗಳಿಲ್ಲ. ವಾಹನ ಸವಾರರು, ಪಾದಚಾರಿಗಳು ಸ್ವಲ್ಪ ಎಚ್ಚರ ತಪ್ಪಿದರೂ ನೀರು ಪಾಲಾಗುವುದು ನಿಶ್ಚಿತ. ನೂರಾರು ಮನೆಗಳಿಗೆ ಸಂಪರ್ಕ ಸಾಧನವಾದ ಈ ಸೇತುವೆ ಶಿಥಿಲಗೊಂಡಿದ್ದು, ಸಂಪರ್ಕದ ಸಮಸ್ಯೆಗೆ ಕಾರಣವಾಗುತ್ತಿದೆ. ಹೀಗಾಗಿ, ಈ ಸೇತುವೆಯ ಜಾಗದಲ್ಲಿ ದೊಡ್ಡದಾದ ಸೇತುವೆ ನಿರ್ವಿುಸಲು ಸರ್ಕಾರ ಕ್ರಮ ಕೈಗೊಳ್ಳಬೇಕು.| ದೇವರಾಜ ಮರಾಠಿ ಬಂಡಲ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಗಿಹೊಸಳ್ಳಿ-ಮುಂಡಗಾರ ಗ್ರಾಮ ಸಂರ್ಪಸುವ ಕಿರಿದಾದ ಸೇತುವೆ ಶಿಥಿಲಗೊಂಡಿದ್ದು, ದೊಡ್ಡ ಸೇತುವೆಯ ಅಗತ್ಯವಿದ್ದಲ್ಲಿ ಗ್ರಾಮಸ್ಥರು ಈ ಬಗ್ಗೆ ಇಲಾಖೆಗೆ ಮನವಿ ನೀಡಬೇಕು. ನಂತರ ಸ್ಥಳ ಪರಿಶೀಲಿಸಿ ವರದಿಯನ್ನು ಇಲಾಖೆ ಹಿರಿಯ ಅಧಿಕಾರಿಗಳು, ಸ್ಥಳೀಯ ಶಾಸಕರಿಗೆ ನೀಡಲಾಗುವುದು. ದೊಡ್ಡ ಸೇತುವೆ ಆಗಬೇಕಿದ್ದರೆ ಕನಿಷ್ಠ 40-50 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಆಗಬೇಕು. ಹಾಗಾದರೆ ಈ ಭಾಗದ ಸಮಸ್ಯೆಗೆ ಶಾಶ್ವತ ಪರಿಹಾರ ಆಗಲಿದೆ.| ರಾಮಚಂದ್ರ ಗಾಂವಕರ ಜಿಪಂ ಇಂಜಿನಿಯರಿಂಗ್ ವಿಭಾಗದ ಎಇ