

ಜಯಪುರ: ಅತ್ತಿಕುಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಲಿನಕುಡಿಗೆ, ಗೀಕಲ್ಕಟ್ಟೆ ಸಂಪರ್ಕ ರಸ್ತೆ ಸಂಪೂರ್ಣ ಹಾಳಾಗಿದ್ದು, ಈ ರಸ್ತೆಯಲ್ಲಿ ಜನ ಹಾಗೂ ವಾಹನ ಸಂಚಾರ ದುಸ್ತರವಾಗಿದೆ.
ರಸ್ತೆ ಅಭಿವೃದ್ಧಿಪಡಿಸುವಂತೆ ಹತ್ತಾರು ವರ್ಷಗಳಿಂದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಅತ್ತಿಕುಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈ ಗ್ರಾಮಗಳಲ್ಲಿ 45ಕ್ಕೂ ಹೆಚ್ಚು ಕುಟುಂಬಗಳು, 200ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಗ್ರಾಮದ ಸಂಪರ್ಕಕ್ಕಿರುವ ಏಕೈಕ ಮಣ್ಣಿನ ರಸ್ತೆ ಈ ವರ್ಷದ ಮಳೆಗೆ ಸಂಪೂರ್ಣ ಹಾಳಾಗಿ ಅಲ್ಲಲ್ಲಿ ಬೃಹದಾಕಾರದ ಗುಂಡಿಗಳು ಬಿದ್ದಿವೆ. ಕೆಲವು ಕಡೆ ರಸ್ತೆ ಕೆಸರು ಗದ್ದೆಯಂತಾಗಿ ಪಾದಚಾರಿಗಳ ಸಂಚಾರಕ್ಕೂ ಯೋಗ್ಯವಿಲ್ಲದಂತಾಗಿದೆ. ಈ ರಸ್ತೆಯಲ್ಲಿ ಶಾಲಾ ವಿದ್ಯಾರ್ಥಿಗಳು, ಅನಾರೋಗ್ಯಪೀಡಿತರು ಹಾಗೂ ಗ್ರಾಮದ ವೃದ್ಧರು ಸಂಚರಿಸಲು ಭಯಪಡುವಂತಾಗಿದೆ.
ಸರ್ಕಾರಗಳು ಪರಿಶಿಷ್ಟಿ ಜಾತಿ ಹಾಗೂ ಪಂಗಡಗಳ ಜನ ವಾಸಿಸುವ ಪ್ರದೇಶಗಳ ಅಭಿವೃದ್ಧಿಗೆ ಪ್ರತಿ ವರ್ಷ ಕೋಟ್ಯಾಂತರ ರೂ. ವೆಚ್ಚ ಮಾಡುತ್ತಿದ್ದರೂ ಬಹುತೇಕ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಜನರು ವಾಸಿಸುತ್ತಿರುವ ಪ್ರದೇಶದ ರಸ್ತೆ ಇದುವರೆಗೂ ಅಭಿವೃದ್ಧಿಯಾಗಿಲ್ಲ. ರಸ್ತೆ ದುರಸ್ತಿಗೆ ಶಾಸಕರು ಹಾಗೂ ಅಧಿಕಾರಿಗಳು ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿಗೆ ಅನೇಕ ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಚುನಾವಣೆ ವೇಳೆ ಮತ ಕೇಳಲು ಬರುವ ರಾಜಕೀಯ ಮುಖಂಡರು ರಸ್ತೆ ಅಭಿವೃದ್ಧಿಯ ಮಾತನಾಡಿ ನಂತರ ಇತ್ತ ತಲೆಹಾಕುತ್ತಿಲ್ಲ. ಕೂಡಲೇ ರಸ್ತೆ ದುರಸ್ತಿಗೆ ಮುಂದಾಗಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.