

ಚಿತ್ರದುರ್ಗ: ದುಶ್ಚಟಗಳಿಂದ ದೂರವಿದ್ದರೆ ಬದುಕು ಸುಖಮಯವಾಗಿರುತ್ತದೆ ಎಂದು ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮೀಜಿ ಹೇಳಿದರು.
ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್, ರಾಜ್ಯಮದ್ಯಪಾನ ಸಂಯಮ ಮಂಡಳಿ, ಉಜಿರೆ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತ, ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ನಗರದ ಅಂಬೇಡ್ಕರ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ 8 ದಿನಗಳ 1895ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದರು.
ಶಿಬಿರದಲ್ಲಿ ಸಂಕಲ್ಪ ಮಾಡಿದಂತೆ ಇನ್ನು ಮುಂದೆ ಮದ್ಯಪಾನ ಮಾಡಬಾರದು. ಮನಸ್ಸಿಗೆ ವಿರುದ್ಧವಾಗಿ ನಡೆದುಕೊಳ್ಳಬಾರದು. ದುಶ್ಚಟಗಳಿಂದ ದೂರವಿದ್ದು, ಆದರ್ಶ ಬದುಕು ಕಟ್ಟಿಕೊಳ್ಳಬೇಕು ಎಂದು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರ್ದೇಶಕಿ ಗೀತಾ ಮಾತನಾಡಿ, ಜೀವನದಲ್ಲಿ ಒಮ್ಮೆ ಎಡವಿದರೆ ಮೇಲೇಳುವುದು ತುಂಬಾ ಕಷ್ಟ. ಶಿಬಿರಾರ್ಥಿಗಳು ತಮ್ಮ ಉಸಿರು ಇರುವವರೆಗೂ ಮತ್ತೆ ಮದ್ಯ ಸೇವಿಸುವುದಿಲ್ಲವೆಂದು ಪ್ರತಿಜ್ಞೆ ಮಾಡಿದ್ದೀರಿ. ಅದರಂತೆ ನಡೆದುಕೊಳ್ಳಬೇಕು ಎಂದರು.
ದುಶ್ಚಟ ಜೀವನವನ್ನು ಸರ್ವನಾಶ ಮಾಡುತ್ತದೆ. ಎಂತಹ ಕಠಿಣ ಪರಿಸ್ಥಿತಿ ಎದುರಾದರೂ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು ಎಂದು ಎಚ್ಚರಿಸಿದರು.
ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಕೆ.ಆರ್. ಮಂಜುನಾಥ್, ರೂಪಾ ಜನಾರ್ಧನ್, ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಚ್. ಮಂಜಪ್ಪ, ಕಣಿವೆ ಮಾರಮ್ಮ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಮಾಳಪ್ಪನಹಟ್ಟಿ ಗ್ರಾಪಂ ಅಧ್ಯಕ್ಷ ಸುರೇಶ್ ಮಾತನಾಡಿದರು.
ಶಿಬಿರದಲ್ಲಿ ಭಾಗವಹಿಸಿದ್ದ 70 ಪುರುಷರು ಮದ್ಯ ಸೇವಿಸುವುದಿಲ್ಲವೆಂದು ಸಂಕಲ್ಪ ಮಾಡಿದರು. ಗ್ರಾಪಂ ಸದಸ್ಯ ಉಮೇಶ್, ರೀನಾ ವೀರಭದ್ರಪ್ಪ, ಕೆಇಬಿ ಷಣ್ಮುಖಪ್ಪ ಇದ್ದರು.
ಜಿಲ್ಲಾ ಜನಜಾಗೃತಿ ವೇದಿಕೆ ನಿರ್ದೇಶಕ ನಾಗರಾಜ್ ಕುಲಾಲ್, ದಿವಾಕರ್ ಪೂಜಾರಿ, ತಾಲೂಕು ಯೋಜನಾಧಿಕಾರಿ ಬಿ. ಅಶೋಕ್, ಮೇಲ್ವಿಚಾರಕ ಎಂ. ಬಾಲಕೃಷ್ಣ, ಸೌಮ್ಯ ಮಂಜುನಾಥ್ ಇದ್ದರು.