ದುಷ್ಕರ್ಮಿಗಳ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹ

ದುಷ್ಕರ್ಮಿಗಳ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹ
Published on

ಹಾಸನ: ನಂಜನಗೂಡು ಶ್ರೀಕಂಠೇಶ್ವರ ಸ್ವಾಮಿ ಉತ್ಸವ ಮೂರ್ತಿಗೆ ಅಪಮಾನ ಮಾಡಿದವರ ವಿರುದ್ಧ ಕೂಡಲೇ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ದೇವಸ್ಥಾನ ಮತ್ತು ಸಂಸ್ಕೃತಿ ರಕ್ಷಣೆಗಾಗಿ ಕಾರ್ಯನಿರತ ಸಂಘಟನೆ, ಕರ್ನಾಟಕ ದೇವಸ್ಥಾನ, ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದಿಂದ ಜಿಲ್ಲಾಡಳಿತಕ್ಕೆ ಮಂಗಳವಾರ ಮನವಿ ಸಲ್ಲಿಸಲಾಯಿತು.
‘ಕಳೆದ ಡಿಸೆಂಬರ್ 26ರಂದು ಮಾರ್ಗಶಿರ ಹುಣ್ಣಿಮೆಯಂದು ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದಲ್ಲಿ ರೂಢಿ ಸಂಪ್ರದಾಯದಂತೆ ಅಂಧಕಾಸುರನ ಸಂಹಾರ ಧಾರ್ಮಿಕ ಕಾರ್ಯಕ್ರಮವನ್ನು ನೆರೆವೇರಿಸುವ ಸಂದರ್ಭದಲ್ಲಿ ಕೆಲವು ದುಷ್ಕರ್ಮಿಗಳು ಉತ್ಸವ ಮೂರ್ತಿಯ ಮೇಲೆ ಎಂಜಲು ನೀರನ್ನು ಎರಚಿ, ಭಕ್ತರ ಧಾರ್ಮಿಕ ಭಾವನೆಗೆ ನೋವುಂಟು ಮಾಡಿದ್ದಾರೆ. ಈ ಉತ್ಸವವು ಪ್ರತೀವರ್ಷ ಅನಾದಿಕಾಲದಿಂದ ನಡೆದುಕೊಂಡು ಬಂದಿದೆ. ಆದರೆ ಈ ವರ್ಷ ಕೆಲವು ದುಷ್ಕರ್ಮಿಗಳು ಪೂರ್ವ ನಿಯೋಜಿತ ಷಡ್ಯಂತ್ರ್ಯವನ್ನು ಮಾಡಿ, ಸದರಿ ಉತ್ಸವದಲ್ಲಿ ದೊಂಬಿ, ಗಲಾಟೆ ಮಾಡಿ, ಶ್ರೀ ನಂಜುಂಡೇಶ್ವರ ದೇವರಿಗೆ ಧಿಕ್ಕಾರ ಕೂಗಿ, ಉತ್ಸವ ಆಚರಣೆಗೆ ಭಂಗ ತರುವ ಮೂಲಕ ಭಕ್ತರ ಧಾರ್ಮಿಕ ಭಾವನೆಗೆ ನೋವುಂಟು ಮಾಡಿ, ಉತ್ಸವ ಮೂರ್ತಿಯನ್ನು ಅಪವಿತ್ರ ಮಾಡಿದ್ದಾರೆ’
‘ಈ ಘಟನೆಯು ಅತ್ಯಂತ ಗಂಭೀರವಾಗಿದ್ದು, ರಾಜ್ಯದ ಲಕ್ಷಾಂತರ ಭಕ್ತರ ಧಾರ್ಮಿಕ ಭಾವನೆಗೆ ಫಾಸಿಯುಂಟು ಮಾಡಿದ್ದಾರೆ. ಅಷ್ಟೇ ಅಲ್ಲದೇ ಈ ಘಟನೆಯನ್ನು ಖಂಡಿಸಿ, ಭಕ್ತರು ಮತ್ತು ಸ್ಥಳೀಯರು ಸ್ವಯಂಪ್ರೇರಿತರಾಗಿ ಶಾಂತಿಯುತ ಪ್ರತಿಭಟನೆಯನ್ನು ಮಾಡಿದ್ದಾರೆ. ಆದರೆ ಪೋಲೀಸರು ಅಪರಾಧಿಗಳನ್ನು ಬಂಧನ ಮಾಡುವ ಬದಲು ಶಾಂತಿಯುತ ಪ್ರತಿಭಟನೆ ಮಾಡಿದ ಭಕ್ತರ ಮೇಲೆ ದೂರು ದಾಖಲು ಮಾಡಿರುವುದು ಖಂಡನೀಯವಾಗಿದೆ. ಕೂಡಲೇ ಸರಕಾರವು ಎಚ್ಚೆತ್ತು ಈ ಉತ್ಸವಕ್ಕೆ ಅಡ್ಡಿಪಡಿಸಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಅವರಿಗೆ ತಕ್ಕ ಶಾಸ್ತಿ ಮಾಡಬೇಕು ಮತ್ತು ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮ ಜರುಗಿಸಬೇಕು,’ ಎಂದು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಈ ವೇಳೆ ಹಿಂದು ಜನಜಾಗೃತಿ ಸಮಿತಿಯ ಗೋವಿಂದರಾಜು, ಶ್ರೀ ಸುಬ್ರಮಣ್ಯ ದೇವಸ್ಥಾನದ ಎಚ್.ಬಿ. ನವೀನ್ ಕುಮಾರ್, ಶ್ರೀ ಕಾಳಿಕಾಂಬ ದೇವಸ್ಥಾನದ ರಾಜಾ ವೆಂಕಟೇಶ್, ಸುಬ್ರಮಣ್ಯ ದೇವಸ್ಥಾನದ ಬಿ. ರಾಜೇಂದ್ರನ್, ನಗರ ಬ್ರಾಹ್ಮಣ ಸಭಾದ ಪಿ.ಎಸ್. ವೆಂಕಟೇಶ್, ಉತ್ತರಮುಖಿ ದೇವಸ್ಥಾನದ ರಾಘವಾಚಾರ್, ಶ್ರೀ ಶನೇಶ್ವರ ದೇವಸ್ಥಾನದ ವಾಸು, ಶ್ರೀ ಆಂಜನೇಯ ದೇವಸ್ಥಾನದ ಸುರೇಶ್ ಗೌಡ, ಶ್ರೀ ಸರಸ್ವತಿ ದೇವಸ್ಥಾನದ ರವಿಕುಮಾರ್, ಶ್ರೀ ಕಾಳಿಕಾಂಬ ದೇವಾಲಯದ ಎಚ್.ಆರ್. ನಾಗೇಶ್ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net