

ನೆಲಮಂಗಲ: ದೇಹದ ಎಲ್ಲ ಅಂಗಾಂಗಳ ಮೇಲೆ ಕೆಟ್ಟ ಪರಿಣಾಮ ಬೀರುವ ತಂಬಾಕು ಉತ್ಪನ್ನಗಳಿಂದ ದೂರವಿದ್ದು, ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಗಂಗಮಾರೇಗೌಡ ತಿಳಿಸಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಅವರಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಖಾಖೆ, ಪದವಿ ಪೂರ್ವ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಫಟಕ ಆಯೋಜಿಸಿದ್ದ ಗುಲಾಬಿ ಆಂದೋಲನ ಜಾಗೃತಿ ಜಾಥಾದಲ್ಲಿ ಮಾತನಾಡಿದರು. ಶಿಕ್ಷಣ ಸಂಸ್ಥೆಗಳ ಬಳಿ ತಂಬಾಕು ಉತ್ಪನ್ನ ಮಾರಾಟ ಮಾಡುವುದು ಕಾನೂನಿನಡಿ ಅಪರಾಧವಾಗಿದೆ. ಈ ನಿಟ್ಟಿನಲ್ಲಿ ಚಿಲ್ಲರೆ ಅಂಗಡಿ ವ್ಯಾಪಾರಿಗಳಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಮಾಡದಂತೆ ಎಚ್ಚರಿಕೆ ನೀಡಲು ಗುಲಾಬಿ ಆಂದೋಲನ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಮಹಿಳೆಯರಲ್ಲೂ ಹೆಚ್ಚು ವ್ಯಸನ: ಪುರುಷರ ಜತೆಗೆ ಹೆಚ್ಚಿನ ಮಹಿಳೆಯರೂ ಧೂಮಪಾನಿಗಳಾಗಿದ್ದಾರೆ. ಇದರಿಂದ ಜನಿಸುವ ಮಕ್ಕಳ ಬೆಳವಣಿಗೆಯ ಮೇಲೂ ಪರಿಣಾಮ ಬೀರಲಿದೆ. ಅನಾರೋಗ್ಯಕ್ಕೆ ಕಾರಣವಾಗುವ ಧೂಮಪಾನದಿಂದ ದೂರವಿದ್ದು, ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾ ಕುಷ್ಟರೋಗ ನಿರ್ಮೂಲನಾಧಿಕಾರಿ ಡಾ.ಶಾಂತಲಾ ಕಿವಿಮಾತು ಹೇಳಿದರು. ನಗರದ ಸರ್ಕಾರಿ ಪ್ರೌಢಶಾಲೆಯ ರಸ್ತೆಯಲ್ಲಿನ ಚಿಲ್ಲರೆ ಅಂಗಡಿಗಳ ಬಳಿ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ತೆರಳಿದ ಶಾಲಾ ವಿದ್ಯಾರ್ಥಿಗಳು ತಂಬಾಕು ಉತ್ಪನ್ನಗಳ ಮಾರಾಟ ಮಾಡದಂತೆ ಅಂಗಡಿ ಮಾಲೀಕರಿಗೆ ಗುಲಾಬಿ ನೀಡಿ ಮನವಿ ಮಾಡಿದರು.
ಬೆ.ಗ್ರಾಂ ಜಿಲ್ಲಾ ತಂಬಾಕು ನಿಯಂತ್ರಣಾ ಘಟಕದ ಸಲಹೆಗಾರ್ತಿ ವಿದ್ಯಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರಾಜೇಶ್ವರಿ, ತಾಲೂಕು ವೈದ್ಯಾಧಿಕಾರಿ ಡಾ.ಹರೀಶ್, ಕ್ಷೇತ್ರಶಿಕ್ಷಣಾಧಿಕಾರಿ ಕೆ.ಸಿ.ರಮೇಶ್, ಕ್ಷೇತ್ರಸಮ್ವಯಾಧಿಕಾರಿ ನರಸಿಂಹಯ್ಯ ಇದ್ದರು.