

ಎನ್.ಆರ್.ಪುರ: ದುಶ್ಚಟಮುಕ್ತ ಸಮಾಜ ನಿರ್ಮಾಣವೇ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗುರಿ ಎಂದು ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯ ದೇವಪ್ಪ ಸಿಗದಾಳ್ ತಿಳಿಸಿದರು.
ಬೆಳ್ಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕುದುರೆಗುಂಡಿ ವಲಯದ ಆಶ್ರಯದಲ್ಲಿ ನಡೆದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ಮಾತನಾಡಿ, ಶಾಲೆ, ಕಾಲೇಜುಗಳಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ದುಶ್ಟಟದ ಪರಿಣಾಮದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಸಣ್ಣ ಮಕ್ಕಳೂ ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ. ಮಕ್ಕಳಿಗೆ ದುಶ್ಚಟದ ಜಾಗೃತಿ ಮೂಡಿಸಿದರೆ ಅವರು ಕುಟುಂಬದಲ್ಲೂ ಜಾಗೃತಿ ಮೂಡಿಸುತ್ತಾರೆ ಎಂದರು.
ಬೆಳ್ಳೂರು ಪ್ರೌಢಶಾಲೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಆರ್.ವೆಂಕಟರಮಣಯ್ಯ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹಲವು ಬಾರಿ ಶಾಲೆಯಲ್ಲಿ ಕಾರ್ಯಕ್ರಮ ಏರ್ಪಡಿಸಿ ವಿದ್ಯಾರ್ಥಿಗಳಿಗೆ ಸಂಸ್ಕಾರ ನೀಡಿದ್ದಾರೆ ಎಂದು ತಿಳಿಸಿದರು.
ಬೆಳ್ಳೂರು ಒಕ್ಕೂಟದ ಅಧ್ಯಕ್ಷ ಶೇಖರ್ ಶೆಟ್ಟಿ, ಮುಖ್ಯಶಿಕ್ಷಕಿ ಸುಧಾ, ಕುದುರೆಗುಂಡಿ ವಲಯ ಮೇಲ್ವಿಚಾರಕ ಸುಧೀರ್, ಎಚ್.ಎಸ್.ಕೃಷ್ಣಮೂರ್ತಿ ಇದ್ದರು.