

ಹಾಸನ: ಬಸ್ಸಿನಲ್ಲಿ ಪ್ರಯಾಣಿಸುವ 40ರಿಂದ 50 ಜನರ ಪ್ರಾಣ ಬಸ್ಸಿನ ಚಾಲಕ ಮತ್ತು ನಿರ್ವಾಹಕರ ಮೇಲಿರುತ್ತದೆ. ಆದ್ದರಿಂದ ಇವರು ಸಮಯ ಪ್ರಜ್ಞೆ ಮತ್ತು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕೆ.ಆರ್. ಅನುಪಮಾ ಹೇಳಿದರು.
ನಗರದ ಡೈರಿ ವೃತ್ತದಲ್ಲಿರುವ ಕೆಎಸ್‌ಆರ್‌ಟಿಸಿ ಪ್ರಾದೇಶಿಕ ತರಬೇತಿ ಕೇಂದ್ರದಲ್ಲಿ ರಾಜ್ಯಮಟ್ಟದ ಸಮನ್ವಯ ಸಂಸ್ಥೆ, ಭುವನೇಶ್ವರಿ ಮದ್ಯಪಾನ ಸೇವನಿಗಳ ಸಮಗ್ರ ಪುನರ್ವಸತಿ ಕೇಂದ್ರ ಇವರ ಸಹಯೋಗದಲ್ಲಿ ಕೆಎಸ್‌ಆರ್‌ಟಿಸಿ ಚಾಲಕ, ನಿರ್ವಾಹಕ, ಮೆಕ್ಯಾನಿಕ್ ಸಿಬ್ಬಂದಿಗೆ ಬುಧವಾರ ಹಮ್ಮಿಕೊಂಡಿದ್ದ ಮಾದಕ ವಸ್ತುವಿನ ನಿಯಂತ್ರಣ ಹಾಗೂ ಅರಿವು ಮೂಡಿಸುವ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಮಾದಕ ವಸ್ತುಗಳ ಮಾರಾಟ ಮೊದಲು ಇಂಜಿನಿಯರ್ ಕಾಲೇಜುಗಳ ಸಮೀಪ ಮಾತ್ರ ಸೀಮಿತವಾಗಿತ್ತು. ಇದೀಗ ಪದವಿಪೂರ್ವ ಕಾಲೇಜುಗಳ ಹತ್ತಿರವೂ ವ್ಯಾಪಿಸುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಹಾಗಾಗಿ ಕಾಲೇಜುಗಳ ಸಮೀಪ ಮಾರುವೇಷದಲ್ಲಿ ಪೊಲೀಸ್ ಸಿಬ್ಬಂದಿಯನ್ನು ನೇಮಿಸಿ ಮಾರಾಟಗಾರರನ್ನು ಬಂಧಿಸಬೇಕು ಎಂದು ಅಭಿಪ್ರಾಯಪಟ್ಟರು.
ಪ್ರಾದೇಶಿಕ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಎ.ಎಸ್. ಗೀತಾಂಜಲಿ ಮಾತನಾಡಿ, ಅತಿಯಾದ ಮದ್ಯ ವ್ಯಸನದಿಂದ ಇಡೀ ಕುಟುಂಬವೇ ಬೀದಿಗೆ ಬೀಳುವ ಸ್ಥಿತಿ ಬರುತ್ತದೆ. ಹಾಗಾಗಿ ಪ್ರಾರಂಭದಲ್ಲೇ ಇಂತಹ ದುಶ್ಚಟಗಳಿಗೆ ನೀವು ಬಲಿಯಾಗಬಾರದು. ಕೆಲಸದ ಒತ್ತಡವನ್ನು ಮರೆಮಾಚಲು ಮಾದಕ ವಸ್ತುಗಳ ದಾಸರಾಗಬಾರದು. ಮಾದಕ ವಸ್ತುಗಳಿಂದ ನೀವು ಮಾಡುವ ಕೆಲಸಗಳಲ್ಲಿ ನಿಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳಲಾಗದೇ ಕೆಲಸದ ಕಾರ್ಯಕ್ಷಮತೆ ಕುಗ್ಗಿ ಅಸಮತೋಲನತೆ ಉಂಟಾಗುತ್ತದೆ. ಇದರಿಂದ ಕೆಲಸ, ಕುಟುಂಬ, ಆರೋಗ್ಯವೂ ಹಾಳಾಗುತ್ತದೆ ಎಂದು ತಮ್ಮ ಸಿಬ್ಬಂದಿಗೆ ಎಚ್ಚರಿಕೆಯ ಹಿತನುಡಿಗಳನ್ನು ಹೇಳಿದರು.
ಮಾನಸಿಕ ರೋಗ ತಜ್ಞ ಡಾ.ಜೆ.ಕಾರ್ತಿಕ್ ಮಾತನಾಡಿ, ಯೌವನದಲ್ಲಿ ಮಾದಕ ವಸ್ತುಗಳ ಚಟಗಳಿಗೆ ಬಲಿಯಾದರೆ ಬದುಕು ದುಸ್ತರವಾಗುವುದರ ಜತೆಗೆ ಶಾರೀರಿಕ ಹಾಗೂ ಮಾನಸಿಕ ಖಿನ್ನತೆಗೆ ಒಳಗಾಗಿ ಸಾವು ಸಂಭವಿಸುವ ಸಾಧ್ಯತೆ ಇರುತ್ತದೆ. ಮದ್ಯಪಾನ, ಬೀಡಿ, ಸಿಗರೇಟ್, ತಂಬಾಕು, ಗಾಂಜಾ, ಕೊಕೆನ್ ಸೇರಿದಂತೆ ಇನ್ನಿತರ ಚಟಗಳಿಗೆ ಒಮ್ಮೆ ಬಲಿಯಾದರೆ ಕೆಲವು ಕ್ಷಣಗಳಿಗೆ ಮಾತ್ರ ಅಮಲಿನ ನಶೆಯಲ್ಲಿ ತೇಲಿಸುತ್ತದೆ. ಇದು ಕ್ಷಣಿಕ ಸುಖವಾಗಿರುತ್ತದೆ. ಇದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದರ ಜತೆಗೆ ಕೆಲಸದ ಕಾರ್ಯಚಟುವಟಿಕೆಗಳಲ್ಲಿ ಹೆಚ್ಚು ಗಮನ ಹರಿಸಲು ಬಿಡುವುದಿಲ್ಲ ಎಂದು ತಿಳಿಸಿದರು.
ಪ್ರಾದೇಶಿಕ ಸಂಪನ್ಮೂಲ ಮತ್ತು ತರಬೇತಿ ಕೇಂದ್ರದ ಸಂಯೋಜಕ ಎನ್. ಬಾಲಕೃಷ್ಣರಾಜ್ ಮಾತನಾಡಿ, ಸಮೀಕ್ಷೆಯ ಪ್ರಕಾರ ನಮ್ಮ ದೇಶದಲ್ಲಿ 16 ಕೋಟಿ ಜನರು ಮಾದಕ ವಸ್ತುಗಳನ್ನು ಸೇವನೆ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇದರಲ್ಲಿ 7 ರಿಂದ 21 ವಯಸ್ಸಿನ ಮಕ್ಕಳು ಮಾದಕ ವಸ್ತುಗಳಿಗೆ ದಾಸರಾಗುತ್ತಿದ್ದಾರೆ ಎಂದು ಹೇಳಿದೆ. ಕಾಲೇಜಿನ ಮಕ್ಕಳು ಹಾಗೂ ಪೋಷಕರು ಇದರ ಬಗ್ಗೆ ಅರಿವು ಮೂಡಿಸಿಕೊಳ್ಳುವುದು ಬಹಳ ಮಹತ್ವದಾಗಿದೆ. ತಂದೆ-ತಾಯಿ ತಮ್ಮ ಮಕ್ಕಳು ಚೆನ್ನಾಗಿರಲೆಂದು ಅವರ ಕೈಗೆ ಹಣ ಕೊಡುತ್ತಾರೆ. ಆದರೆ ಈ ಹಣವನ್ನು ದುರುಪಯೋಗ ಮಾಡಿಕೊಳ್ಳುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಇದನ್ನು ನಾಶಪಡಿಸಲು ಸಾಧ್ಯವಿಲ್ಲ ಆದರೆ ತಡೆಗಟ್ಟಲು ಸಾಧ್ಯ. ಇದರ ಸಲುವಾಗಿಯೇ ಭಾರತ ಸರ್ಕಾರ ಎಸ್‌ಎಲ್‌ಸಿಎ ಅನ್ನು ನೇಮಕ ಮಾಡಿದೆ ಎಂದರು.
ಕಾರ್ಯಕ್ರಮದಲ್ಲಿ ಭುವನೇಶ್ವರಿ ಮದ್ಯಪಾನ ಸೇವನಿಗಳ ಸಮಗ್ರ ಪುನರ್ವಸತಿ ಕೇಂದ್ರದ ಯೋಜನಾ ನಿರ್ದೇಶಕಿ ಅಂಜಲಿ ಗೋವಿಂದ ರಾಜು ಹಾಗೂ ಪ್ರಾದೇಶಿಕ ತರಬೇತಿ ಕೇಂದ್ರದ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.