ದುಶ್ಚಟಗಳಿಗೆ ಬಲಿಯಾಗದೆ ಕ್ರೀಡೆಯಲ್ಲಿ ತೊಡಗಿ: ಸಚಿವ ಡಾ.ಎಚ್.ಸಿ ಮಹದೇವಪ್ಪ ಸಲಹೆ

13
Published on

ಮೈಸೂರು: ಯುವಕರು ದುಶ್ಚಟಗಳಿಗೆ ಬಲಿಯಾಗದೆ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸಲಹೆ ನೀಡಿದರು.
ಅಶೋಕಪುರಂ ಯೂತ್ಸ್, ಮೈಸೂರು ಡಿಸ್ಟ್ರಿಕ್ಟ್ ಅಮೆಚೂರ್ ಬಾಡಿ ಬಿಲ್ಡರ್ ಅಸೋಸಿಯೇಷನ್‌ನಿಂದ ಮಾಜಿ ಸಂಸದ ಆರ್.ಧ್ರುವನಾರಾಯಣ ಅವರ ಸ್ಮರಣಾರ್ಥ ಅಶೋಪುರಂನಲ್ಲಿ ಭಾನುವಾರ ಆಯೋಜಿಸಿದ್ದ ಅಂತರ ಜಿಲ್ಲಾ ದೇಹದಾರ್ಢ್ಯ ಸ್ಪರ್ಧೆ ಆರ್.ಧ್ರುವನಾರಾಯಣ ಕಪ್-2023 ಹಾಗೂ ನೂತನ ಶಾಸಕರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಕ್ರೀಡೆ ಯುವಕರಿಗೆ ಸ್ಫೂರ್ತಿ ನೀಡುತ್ತದೆ. ದಿವಂಗತ ಆರ್.ಧ್ರುವನಾರಾಯಣ ಅವರ ಸ್ಮರಣಾರ್ಥ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ. ಇತ್ತೀಚಿನ ದಿನಗಳಲ್ಲಿ ಯುವ ಜನಾಂಗ ದುಶ್ಚಟಗಳಿಗೆ ಬಲಿಯಾಗುತ್ತಿದ್ದು, ತಮ್ಮ ಪ್ರತಿಭೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಂಡು ಸಮಾಜದ ಉತ್ತಮ ಸತ್ಪ್ರಜೆಗಳಾಗಬೇಕು ಎಂದರು.
ಸಂವಿಧಾನ ಇದ್ದರಷ್ಟೇ ನಮಗೆಲ್ಲ ರಕ್ಷಣೆ. ಆದ್ದರಿಂದ ಪ್ರತಿ ಶಾಲಾ-ಕಾಲೇಜಿನಲ್ಲೂ ಸಂವಿಧಾನ ಪೀಠಿಕೆಯನ್ನು ಓದುವಂತೆ ಆದೇಶ ಮಾಡಲಾಗಿದೆ. ಅಭಿವೃದ್ಧಿ ವಿಚಾರ ಸಂಬಂಧ ಯಾವುದೇ ಸಮಸ್ಯೆಗಳಿದ್ದರೂ ಬಗೆಹರಿಸುವ ನಿಟ್ಟಿನಲ್ಲಿ ನಾನು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.
ಕೋಮುವಾದ ಹತ್ಯಿಕ್ಕುವ ನಿಟ್ಟಿನಲ್ಲಿ ನಮ್ಮ ಸರ್ಕಾರ ದಿಟ್ಟ ನಿಲುವು ತಾಳಿರುವುದಲ್ಲದೆ ನೀಡಿರುವ ಎಲ್ಲ ಭರವಸೆಗಳನ್ನು ಈಡೇರಿಸುವ ಮೂಲಕ ಜನರ ವಿಶ್ವಾಸಗಳನ್ನು ಉಳಿಸಿಕೊಳ್ಳುತ್ತೇವೆ. ಮುಂದೆಯೂ ಅಭಿವೃದ್ಧಿ ಕಾರ್ಯಕ್ರಮಗಳು ನಿರಂತರವಾಗಿ ಮುಂದುವರಿಯಲಿದೆ ಎಂದು ಹೇಳಿದರು.
ಇದೇ ವೇಳೆ ನೂತನ ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ದರ್ಶನ್ ಧ್ರುವನಾರಯಣ ಅವರನ್ನು ಸನ್ಮಾನಿಸಲಾಯಿತು. ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಮಾಜಿ ಮೇಯರ್ ಪುರುಷೋತ್ತಮ, ಕಾಂಗ್ರೆಸ್ ಮುಖಂಡ ಪ್ರದೀಪ್‌ಕುಮಾರ್, ಮಖಂಡರಾದ ಜೋಗಿ ಮಹೇಶ್, ಸುರೇಶ್, ಜೈರಾಜ್, ಜೇಸುದಾಸ್, ಮಯೂರ್, ಕೃಷ್ಣ, ಆದರ್ಶ್‌ಭೀಮ್, ಶ್ಯಾಮ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net