

ದೇವದುರ್ಗ: ಫ್ಯಾಶನ್ ಹೆಸರಿನಲ್ಲಿ ಮೋಜು ಮಸ್ತಿ ಮಾಡಲು ಯುವಜನತೆ ದುಶ್ಚಟಗಳ ದಾಸರಾಗುತ್ತಿದ್ದು, ಇದರಿಂದ ಅನಾರೋಗ್ಯಕ್ಕೆ ತುತ್ತಾಗಿ ಜೀವಕ್ಕೆ ಆಪತ್ತು ಉಂಟಾಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹನುಮಂತ ಸಾತ್ವಿಕ್ ಹೇಳಿದರು.
ಪಟ್ಟಣದ ಕೋರ್ಟ್ ಆವರಣದಲ್ಲಿ ತಾಲೂಕು ಸೇವಾ ಸಮಿತಿ, ವಕೀಲರ ಸಂಘ, ಆರೋಗ್ಯ ಇಲಾಖೆಯಿಂದ ಆಯೋಜಿಸಿದ್ದ ವಿಶ್ವ ತಂಬಾಕು ರಹಿತ ದಿನಾಚರಣೆ ಹಾಗೂ ಅಂತಾರಾಷ್ಟ್ರೀಯ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಬುಧವಾರ ಮಾತನಾಡಿದರು. ಧೂಮಪಾನ, ಮದ್ಯಪಾನ, ಗುಟ್ಕಾ ಮನುಷ್ಯನ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿವೆ. ಕಾರ್ಮಿಕರಿಗೆ ಸರ್ಕಾರ ವಿವಿಧ ಯೋಜನೆಗಳನ್ನು ರೂಪಿಸಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬಹುದಾಗಿದೆ. ಈ ಬಗ್ಗೆ ಪ್ರತಿಯೊಬ್ಬರೂ ಜಾಗೃತಿ ಹೊಂದಬೇಕು ಎಂದರು.
ತಾಲೂಕು ಆರೋಗ್ಯ ಅಧಿಕಾರಿ ಡಾ.ಬನದೇಶ್ವರ ಮಾತನಾಡಿ, ತಂಬಾಕು ಸೇವನೆ ಅತ್ಯಂತ ಅಪಾಯಕಾರಿ ಚಟವಾಗಿದೆ.ಇದರಿಂದ ಕ್ಯಾನ್ಸರ್ ಸೇರಿ ವಿವಿಧ ರೋಗಗಳು ಬರುತ್ತವೆ. ಗಂಡಸರಲ್ಲಿ ಲೈಂಗಿಕ ಅಶಕ್ತತೆ, ಹೆಣ್ಣು ಮಕ್ಕಳ ಗರ್ಭಪಾತ, ಶಿಶುಗಳ ಮರಣ ಹೆಚ್ಚಾಗಲಿದೆ. ತಂಬಾಕು ನಿಷೇಧಕ್ಕೆ ಹಲವು ಕಾನೂನು ಜಾರಿಗೊಳಿಸಲಾಗಿದ್ದು, ಸೆಕ್ಷನ್ 4ರ ಪ್ರಕಾರ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ನಿಷೇಧಿಸಲಾಗಿದೆ. ಸೆಕ್ಷನ್ 5ರ ಪ್ರಕಾರ ತಂಬಾಕು ಉತ್ಪನ್ನ ಬಗ್ಗೆ ನೇರ ಪರೋಕ್ಷ ಉತ್ತೇಜನ ಜಾಹೀರಾತು ನಿಷೇಧ ಹೇರಲಾಗಿದೆ.
ತಂಬಾಕು ತ್ಯಜಿಸುವುದರಿಂದ ರಕ್ತದೊತ್ತಡ, ಹೃದಯಾಘಾತ ಕಡಿಮೆಯಾಗಲಿದೆ. ಹಣದ ಉಳಿತಾಯ ಜತೆಗೆ ಬಾಯಿ ಅಲ್ಸರ್ ನಿವಾರಣೆಯಾಗಿ ಇನ್ನೊಬ್ಬರಿಗೆ ತೊಂದರೆ ನೀಡುವುದು ತಪ್ಪಲಿದೆ ಎಂದರು. ಸಿವಿಲ್ ನ್ಯಾಯಾಧೀಶ ಬಾಳಸಾಹೇಬ್ ವಡವಡೆ, ವಕೀಲರ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ಮನ್ನಾಪುರ, ಪಿಡ್ಡಯ್ಯ ಟಿ.ನಾಯಕ, ವೆಂಕನಗೌಡ ಮಾಪಾ, ಪ್ರತಿಭಾ, ಪದ್ಮಾಮೇಟಿ, ಡಾ.ಆನಂದ, ಶಿವಪ್ಪ ಇತರರಿದ್ದರು.