ದುಶ್ಚಟಗಳಿಂದ ಮುಕ್ತರಾಗಿ ಜೀವನ ಸಂಭ್ರಮಿಸಿ

28blrp1
Published on

ಬೇಲೂರು: ದುಶ್ಚಟಗಳಿಂದ ಮುಕ್ತರಾಗಿ ಜೀವನವನ್ನು ಸಂಭ್ರಮಿಸಿ ಎಂದು ಕರ್ನಾಟಕ ಜನಜಾಗೃತಿ ವೇದಿಕೆ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ಹೇಳಿದರು.
ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟ್ ಮತ್ತು ಕರ್ನಾಟಕ ಜನಜಾಗೃತಿ ವೇದಿಕೆ ಆಯೋಜಿಸಿದ್ದ ಮದ್ಯವರ್ಜನ ಶಿಬಿರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ದೇಶಾದ್ಯಂತ ನೂರಾರು ಮಠ, ಮಂದಿರ, ದೇಗುಲಗಳಿವೆ. ಶಿಕ್ಷಣದ ಅರಿವು ಮೂಡಿಸುವ ವಿದ್ಯಾಪೀಠ, ಶಾಲಾ ಕಾಲೇಜುಗಳಿವೆ. ಹಾಗಿದ್ದೂ ಹಲವರು ದುಶ್ಚಟಗಳಿಗೆ ಮಾರಿಹೋಗುತ್ತಿರುವುದು ವಿಷಾದನೀಯ ಎಂದರು.
ಮನುಷ್ಯ ಜೀವನದ ಪರೀಕ್ಷೆಯಲ್ಲಿ ಉತ್ತೀರ್ಣನಾದರೆ ಸಮಾಜಕ್ಕೆ ಉತ್ತಮ ಸಂದೇಶ ನೀಡಬಹುದು. ಅದೇ ಮನುಷ್ಯ ಜೀವನದಲ್ಲಿ ಅನುತ್ತೀರ್ಣನಾದರೆ ಸಮಾಜಕ್ಕೆ ಮಾರಕನಾಗುತ್ತಾನೆ ಎಂದರು.
ಮಾನವ ಜನ್ಮ ದೊರೆತಿರುವಾಗ ಸಾಮಾನ್ಯ ಜ್ಞಾನ ಕಳೆದುಕೊಂಡು ಕೆಟ್ಟ ಹಾದಿ ಹಿಡಿಯಬಾರದು. ಶಿಬಿರದಲ್ಲಿ ಭಾಗವಹಿಸಿ ಹೊಸ ವ್ಯಕ್ತಿಗಳಾಗಬೇಕು. ಈ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ಸಾರಬೇಕು ಎಂದು ಅವರು ಕಿವಿಮಾತು ಹೇಳಿದರು.
ಶ್ರೀ ಪಾತಾಳೇಶ್ವರ ದೇಗುಲ ಸೇವಾ ಟ್ರಸ್ಟ್ ಅಧ್ಯಕ್ಷ ಪೈಂಟ್ ರವಿ ಮಾತನಾಡಿ, ಮದ್ಯವರ್ಜನ ಶಿಬಿರಕ್ಕೆ ಬಂದಿರುವ ಶಿಬಿರಾರ್ಥಿಗಳು ಕುಟುಂಬ, ಸಮಾಜ, ದೇಶದ ಬಗ್ಗೆ ಪ್ರೀತಿ ಮತ್ತು ಕಳಕಳಿ ರೂಢಿಸಿಕೊಂಡು ಬದುಕಬೇಕು ಎಂದರು.
ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಅವರು ನಾಡಿನ ವಿವಿಧೆಡೆ ಶಿಬಿರ ಆಯೋಜಿಸಿ ಸಾಮಾನ್ಯ ಜನರಿಗೂ ಅರಿವಿನ ಹಾದಿ ತೋರುತ್ತಿದ್ದಾರೆ. ಇದರ ಸದುಪಯೋಗ ಪಡೆದು ಉತ್ತಮ ಪ್ರಜೆಗಳಾಗಬೇಕು. ಆ ಮೂಲಕ ನಮ್ಮ ಮಕ್ಕಳಿಗೆ ನಾವೇ ಮಾದರಿ ಆಗಬೇಕು ಎಂದರು.
ಬಿಜೆಪಿ ತಾಲೂಕು ಮಹಿಳಾ ಘಟಕ ಅಧ್ಯಕ್ಷೆ ಶೋಭಾ ಗಣೇಶ್, ಮದ್ಯವರ್ಜನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದಯಾನಂದ, ಕರ್ನಾಟಕ ಜನಜಾಗೃತಿ ವೇದಿಕೆ ಮುಖ್ಯಸ್ಥೆ ಮಮತಾ, ಉದ್ಯಮಿಗಳಾದ ಸಂತೋಷ್, ನಾಗರಾಜು, ಚೇತನ್ ಕುಮಾರ್, ಶಿಕ್ಷಕ ಕೇಶವೇಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net