

ಚಿಕ್ಕಬಳ್ಳಾಪುರ: ದುಶ್ಚಟಗಳು ಒಳ್ಳೆಯ ಆರೋಗ್ಯವನ್ನು ಹಾಳುಗೆಡವಿ, ತೊಂದರೆಗೆ ಸಿಲುಕಿಸುತ್ತವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಬಿ.ಎಂ.ಯೋಗೇಶ್ ಗೌಡ ಎಚ್ಚರಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಪಂ., ಜಿಲ್ಲಾ ಆಯುಷ್ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಆಯುಷ್ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡ ಸೇರಿ ನಾನಾ ಕಾರಣಗಳಿಂದ ಆರೋಗ್ಯದ ಕಡೆಗೆ ಹೆಚ್ಚಿಗೆ ಗಮನಹರಿಸುತ್ತಿಲ್ಲ. ಸಣ್ಣ ಸಮಸ್ಯೆಗಳನ್ನು ಆರಂಭದಲ್ಲಿ ಕಡೆಗಣಿಸಿ ಕೊನೆಗೆ ಗಂಭೀರ ಸ್ವರೂಪಕ್ಕೆ ಪಡೆದಾಗ ಸಂಕಷ್ಟ ಅನುಭವಿಸುವುದು ಸಾಮಾನ್ಯವಾಗಿದೆ. ಈ ನಿರ್ಲಕ್ಷೃ ಧೋರಣೆ ಬಿಟ್ಟು ಕಾಲ ಕಾಲಕ್ಕೆ ಆರೋಗ್ಯ ತಪಾಸಣೆಗೆ ಒಳಪಡಬೇಕು ಎಂದರು.
ಅನೇಕರು ದುಶ್ಟಗಳಿಗೆ ದಾಸರಾಗುತ್ತಿದ್ದಾರೆ. ಕ್ಷಣಿಕ ಸುಖಕ್ಕಾಗಿ ಭವಿಷ್ಯನ್ನೇ ಹಾಳುಮಾಡಿಕೊಳ್ಳುತ್ತಿದ್ದಾರೆ, ಈಗಲಾದರೂ ಎಚ್ಚೆತ್ತುಕೊಳ್ಳಬೇಕು ಎಂದು ಸಲಹೆ ನೀಡಿದರು.
ಪರಿಸರ ಮಾಲಿನ್ಯ, ಹವಮಾನ ವೈಪರೀತ್ಯದಿಂದಾಗಿ ಮಾರಕ, ಹೊಸ ಕಾಯಿಲೆಗಳು ವೇಗವಾಗಿ ಹರಡುತ್ತಿವೆ. ಇವುಗಳನ್ನು ನಿಯಂತ್ರಿಸುವುದೇ ದೊಡ್ಡ ಸವಾಲಾಗಿದೆ. ಆದ್ದರಿಂದ ಪ್ರತಿಯೊಬ್ಬರು ಉತ್ತಮ ಪರಿಸರ ನಿರ್ಮಿಸಲು ಮುಂದಾಗಬೇಕು ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ ಶುಹಾಬುದ್ದೀನ್ ತಿಳಿಸಿದರು.
ಜನರ ಆರೋಗ್ಯ ಮತ್ತು ಗುಣಮಟ್ಟದ ಸೇವೆಗಾಗಿ ಸರ್ಕಾರ ಆಯುಷ್ಮಾನ್ ಯೋಜನೆ, ಜನೌಷಧ ಮಳಿಗೆ ಸ್ಥಾಪನೆ, ಆರೋಗ್ಯ ಉಚಿತ ತಪಾಸಣೆ ಮತ್ತು ಲಸಿಕೆ ಹಾಕಿಸುವಿಕೆ ಸೇರಿ ಹಲವು ಸವಲತ್ತುಗಳನ್ನು ಜಾರಿಗೆ ತಂದಿದೆ ಎಂದು ತಿಳಿಸಿದರು.
ಜಿಲ್ಲಾ ಯೋಗ ಶಿಕ್ಷಣ ಮತ್ತು ಪತಂಜಲಿ ಸಮಿತಿ ಅಧ್ಯಕ್ಷ ಸಾಫ್ಟ್‌ಟೆಕ್ ಗೋವಿಂದರಾಜು ಇತರರಿದ್ದರು.