

ಚಿತ್ರದುರ್ಗ: ದುಶ್ಚಟಗಳು ಮಾನಸಿಕ, ದೈಹಿಕ ಅನಾರೋಗ್ಯಕ್ಕೆ ಕಾರಣವಾಗುವ ಜತೆಗೆ ಬದುಕನ್ನು ನಾಶದತ್ತ ಕೊಂಡೊಯ್ಯುತ್ತದೆ ಎಂದು ಡಾ. ಚಂದ್ರಶೇಖರ್ ಕಂಬಳಿಮಠ್ ಎಚ್ಚರಿಸಿದರು.
ಮಾದಕ ವಸ್ತು ವಿರೋಧಿ ದಿನಾಚರಣೆ ಪ್ರಯುಕ್ತ ಜಿಲ್ಲಾ ಕಾರಾಗೃಹದಲ್ಲಿ ಸೋಮವಾರ ಆಯೋಜಿಸಿದ್ದ ಕಾರಾಗೃಹ ಬಂಧಿನಿವಾಸಿಗಳಿಗೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾದಕ ವ್ಯಸನವು ನರ, ಮಿದುಳು, ಶ್ವಾಸಕೋಶ, ಯಕೃತ್ತು ಎಲ್ಲವನ್ನೂ ನಾಶ ಮಾಡುತ್ತದೆ. ಮುಖ್ಯವಾಗಿ ಲೈಂಗಿಕ ದೌರ್ಬಲ್ಯ ಎದುರಾಗುತ್ತದೆ ಎಂದು ಹೇಳಿದರು.
ಆಧುನೀಕರಣದ ಭರಾಟೆಯಲ್ಲಿ ಪಾರ್ಟಿಗಳ ಹೆಸರಲ್ಲಿ ಮಹಿಳೆಯರೂ ವ್ಯಸನಕ್ಕೆ ಗುರಿಯಾಗುತ್ತಿದ್ದಾರೆ. ಮೊದಲಿಗೆ ಶೋಕಿಗಾಗಿ ಪ್ರಾರಂಭವಾಗುವ ಈ ಅಭ್ಯಾಸ ಕ್ರಮೇಣ ಚಟವಾಗಿ ಬದಲಾಗುತ್ತದೆ ಎಂದು ಎಚ್ಚರಿಸಿದರು.
ಅಬಕಾರಿ ನಿರೀಕ್ಷಕ ಶೇಕ್ ಇಮ್ರಾನ್ ಮಾತನಾಡಿ, ಕುಡಿತ, ಗುಟ್ಖಾ, ಗಾಂಜಾ, ಅಫೀಮು ಸೇರಿ ಮತ್ತು ಭರಿಸುವ ಕೆಲ ಮಾತ್ರೆಗಳು ಹೆಚ್ಚಾಗುತ್ತಿದ್ದು, ಇದರ ಪರಿಣಾಮ ಸಮಾಜದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಳ ಆಗುತ್ತಿವೆ ಎಂದರು.
ಈ ನಿಟ್ಟಿನಲ್ಲಿ ಉತ್ತಮ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಒಗ್ಗೂಡಿ ಜನರಲ್ಲಿ ಜಾಗೃತಿ ಮೂಡಿಸಬೇಕು. ದುಶ್ಚಟಗಳಿಂದ ವ್ಯಕ್ತಿತ್ವ ಜತೆಗೆ ಕುಟುಂಬದ ಬದುಕು ಬೀದಿಗೆ ಬೀಳುತ್ತದೆ ಎಂಬ ಅರಿವು ಬೆಳೆಸಬೇಕು ಎಂದು ತಿಳಿಸಿದರು.
ಅಬಕಾರಿ ನಿರೀಕ್ಷಕ ಅರುಣ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಿಲ್ಲಾ ಕಾರಾಗೃಹದ ಜೈಲರ್ ಶ್ರೀಮಂತಗೌಡ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಮಜಹರ್ ಉಲ್ಲಾ, ರೋಟರಿ ಕ್ಲಬ್ ಚಿನ್ಮೂಲಾದ್ರಿ ಅಧ್ಯಕ್ಷ ಅರುಣ್‌ಕುಮಾರ್, ಶ್ರೀನಿವಾಸ್ ಮಳಲಿ ಉಪಸ್ಥಿತರಿದ್ದರು.
ಜಿಲ್ಲಾ ಅಬಕಾರಿ ಇಲಾಖೆ, ಜಿಲ್ಲಾ ಕಾರಾಗೃಹ, ಆರೋಗ್ಯ ಇಲಾಖೆಯ ಮಾನಸಿಕ ರೋಗ ವಿಭಾಗ, ರೋಟರಿ ಕ್ಲಬ್ ಚಿನ್ಮೂಲಾದ್ರಿ, ಭಾರತೀಯ ರೆಡ್‌ಕ್ರಾಸಡ್ ಸಂಸ್ಥೆ, ಪ್ರಜಾಸೇವಾ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘದ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಬಾಪೂಜಿ ಶಾಲೆಯಲ್ಲಿ ಆಚರಣೆ
ಚಿತ್ರದುರ್ಗ: ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿಶ್ವ ಮಾದಕವಸ್ತು ಸೇವನೆ ಮತ್ತು ಕಳ್ಳಸಾಗಾಣಿಕೆ ವಿರೋಧಿ ದಿನವನ್ನು ಸೋಮವಾರ ಆಚರಿಸಲಾಯಿತು. ಡೇಟ್ ಚಾರಿಟೇಬಲ್ ಸೊಸೈಟಿ ಅಧ್ಯಕ್ಷ ಡಾ.ಎಚ್.ಎಸ್.ಶಿವಣ್ಣ, ಯೋಜನಾ ನಿರ್ದೇಶಕಿ ಗಾಯತ್ರಿ, ನಗರಠಾಣೆ ಎಎಸ್‌ಐ ಟಿ.ಗಂಗಾಧರಪ್ಪ, ಪ್ರಾಚಾರ್ಯೆ ಜಯಲಕ್ಷ್ಮಿ ಇತರರಿದ್ದರು.
===