ದುಶ್ಚಟಗಳಿಂದ ಬದುಕಿನ ನೆಮ್ಮದಿ ನಾಶ

29blk1
Published on

ಭಾಲ್ಕಿ: ಆನಂದವಾಡಿ ಗ್ರಾಮದಲ್ಲಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ಧೇವರು ಜೋಳಿಗೆ ಹಿಡಿದು ದುಶ್ಚಟಗಳ ಭಿಕ್ಷೆ ಬೇಡಿದರು. ಶ್ರಾವಣ ಮಾಸದ ನಿಮಿತ್ತ ಆನಂದವಾಡಿಯಲ್ಲಿ ಒಂದು ವಾರದಿಂದ ಬಸವ ದರ್ಶನ ಪ್ರವಚನ ನಡೆಸಿಕೊಡುತ್ತಿರುವ ಪಟ್ಟದ್ದೇವರು ಮಂಗಳವಾರ ಬೆಳಗ್ಗೆ ಗ್ರಾಮದಲ್ಲಿ ಸಂಚರಿಸಿ, ದುಶ್ಚಟಗಳನ್ನು ಜೋಳಿಗೆಯಲ್ಲಿ ಹಾಕುವಂತೆ ಭಕ್ತರಲ್ಲಿ ಕೋರಿದರು.
ಬೆಳಗ್ಗೆ ೬ರಿಂದ ಮಧ್ಯಾಹ್ನ ೧೨ಗಂಟೆವರೆಗೆ ಪ್ರತಿ ಬಡಾವಣೆಯ ಮನೆಗೆ ಭೇಟಿ ನೀಡಿ ಮಹಿಳೆಯರು, ಹಿರಿಯರು, ಯುವಕರ ಜೇಬಿನಲ್ಲಿನ ತಂಬಾಕು, ಗುಟ್ಕಾ, ಬೀಡಿ, ಸಿಗರೇಟ್ ಜೋಳಿಗೆಗೆ ಹಾಕಿಸಿ ಮದ್ಯಪಾನ, ಧೂಮಪಾನಗಳನ್ನು ತ್ಯಜಿಸುವುದಾಗಿ ಪ್ರತಿಜ್ಞೆ ಮಾಡಿಸಿ, ಸನ್ಮಾರ್ಗದ ದೀಕ್ಷೆ ನೀಡಿದರು.
ದುಶ್ಚಟ ತ್ಯಜಿಸುವ ಸಂಕಲ್ಪ ಮಾಡಿದ ಜನರ ಹಣೆಗೆ ವಿಭೂತಿ ಹಚ್ಚಿ, ಕೊರಳಿಗೆ ರುದ್ರಾಕ್ಷಿ ಕಟ್ಟಿ ಸಾರಾಯಿ ಕುಡಿಯುವುದಿಲ್ಲ, ಬೀಡಿ, ಸಿಗರೇಟ್ ಸೇದುವುದಿಲ್ಲ, ಗುಟ್ಕಾ ತಿನ್ನುವುದಿಲ್ಲ. ಶರಣನಾಗಿ, ಸದ್ಗುಣವಂತನಾಗಿ ಸಮಾಜದಲ್ಲಿ ಬಾಳುತ್ತೇನೆ ಎಂದು ಪ್ರತಿಜ್ಞೆ ಮಾಡಿಸಿದರು. ಕೆಲವು ಮಹಿಳೆಯರು ಮಗನಿಗೆ, ಗಂಡನಿಗೂ ಕುಡಿಯುವುದನ್ನು ಬಿಡಿಸಿ ಎಂದು ಸ್ವಾಮೀಜಿಯನ್ನು ಕೋರಿದರು.
ವ್ಯಸನ ಮುಕ್ತ ಸಮಾಜ ಕಟ್ಟುವ ಉದ್ದೇಶದಿಂದ ಮೂರ್ನಾಲ್ಕು ವರ್ಷದಿಂದ ಅಭಿಯಾನ ಹಮ್ಮಿಕೊಂಡಿದ್ದೇವೆ. ದುಶ್ಚಟ ಅಂಟಿಸಿಕೊAಡವರ ಮನಃಪರಿವರ್ತನೆ ಮಾಡುವುದು ಇದರ ಉದ್ದೇಶ. ಸಾಮಾನ್ಯವಾಗಿ ಸಾಧುಸಂತರು ಭಕ್ತರಿಂದ ದವಸ, ಧಾನ್ಯ ಭಿಕ್ಷೆ ಕೇಳುತ್ತಿದ್ದರು. ನಾವು ದುಶ್ಚಟಗಳನ್ನು ಜೋಳಿಗೆಗೆ ಹಾಕಿ, ಶರಣರಾಗಿ ಬಾಳಿ ಎಂದು ಕೋರುತ್ತಿದ್ದೇವೆ ಎಂದು ಸ್ವಾಮೀಜಿ ನುಡಿದರು.
ಪ್ರಮುಖರಾದ ಬಾಬುರಾವ ಭೂರೆ, ಗಣಪತಿ ಭೂರೆ, ಸಂಗಶೆಟ್ಟಿ ಭೂರೆ, ವಿಜಯಕುಮಾರ ಭೂರೆ, ಪಂಡಿತ ಭೂರೆ, ಶಿವರಾಜ ಭೂರೆ, ಕಲಪ್ಪ ಭೂರೆ, ಶಿವಾಜಿ ಬರ್ಮಾ, ಶಿವಕುಮಾರ ಭೂರೆ, ಷಣ್ಮುಖಪ್ಪ ಭೂರೆ, ಬಸವರಾಜ ಮಡಿವಾಳ, ಭದ್ರೇಶ ಹಿರೇಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net