

ಚಿತ್ರದುರ್ಗ: ಸ್ವಚ್ಛತೆ, ಪೌಷ್ಟಿಕ ಆಹಾರ ಸೇವನೆ ಹಾಗೂ ದುಶ್ಚಟಗಳಿಂದ ದೂರವಿದ್ದರೆ ಉತ್ತಮ ಆರೋಗ್ಯ ಪಡೆಯಲು ಸಾಧ್ಯವಾಗಲಿದೆ ಎಂದು ಚಿತ್ರದುರ್ಗ ತಾಲೂಕು ಆರೋಗ್ಯಾಧಿಕಾರಿ ಎನ್.ಎಸ್. ಮಂಜುನಾಥ್ ಹೇಳಿದರು.
ಆರೋಗ್ಯ ಇಲಾಖೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಸಹಯೋಗದಲ್ಲಿ ಅಗಸನಕಲ್ಲು ಟಿಪ್ಪುನಗರದ ಶ್ರೀ ದುರ್ಗಾಪರಮೇಶ್ವರಿ ದೇವಾಲಯ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸ್ವ-ಸಹಾಯ ಸಂಘಗಳ ಗುಂಪಿಗೆ ಪರಿಸರ ಸ್ವಚ್ಛತೆ, ಜೀವನ ಮೌಲ್ಯ ತಿಳಿಸುವ ಆರೋಗ್ಯ ಶಿಕ್ಷಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಲುಷಿತ ನೀರು, ಗಾಳಿ, ಆಹಾರ ಸೇವನೆಯಿಂದ ರೋಗ ರುಜಿನಗಳು ಬಾಧಿಸುತ್ತವೆ. ಮನೆ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳಬೇಕಿ ಎಂದು ಸಲಹೆ ನೀಡಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ. ಮೂಗಪ್ಪ ಮಾತನಾಡಿ, ಬಾಲ್ಯವಿವಾಹ ಪ್ರಕರಣಗಳು ನೀವಿರುವ ಪ್ರದೇಶದಲ್ಲಿ ಕಂಡು ಬಂದರೆ ಕೂಡಲೇ 1098ಕ್ಕೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದರು. ಇದೇ ವೇಳೆ ದೇವಾಲಯದ ಸುತ್ತ-ಮುತ್ತ ಸ್ವಸಹಾಯ ಸಂಘದ ಸದಸ್ಯರು ಸ್ವಚ್ಛತಾ ಕಾರ್ಯ ನಡೆಸಿದರು. ಯೋಜನೆ ಮೇಲ್ವಿಚಾರಕ ಶಿವಕುಮಾರ್, ಜ್ಞಾನವಿಕಾಸ ಘಟಕದ ಚಂದ್ರಕಲಾ, ಅಂಗನವಾಡಿ ಕಾರ‌್ಯಕರ್ತೆಯರಾದ ಅಸ್ಮಾಬಾನು, ಹಸೀನಾ ಇತರರು ಇದ್ದರು.