

ಚಿಕ್ಕಬಳ್ಳಾಪುರ: ಆರೋಗ್ಯಕ್ಕೆ ಹಾನಿಕಾರಕ ಎನಿಸಿದರೂ ತಂಬಾಕು ಸೇವನೆಯನ್ನು ಬಿಡದಿರುವುದು ಸರಿಯಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಇಂದಿರಾ ಆರ್ ಕಬಾಡೆ ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕಿನ ನಂದಿ ಗಿರಿಧಾಮದಲ್ಲಿ ತಂಬಾಕಿನಿಂದ ಪರಿಸರದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸುವ ಸಲುವಾಗಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಶುಕ್ರವಾರ ಹಮ್ಮಿಕೊಂಡಿದ್ದ ಪರಿಸರ ಸ್ವಚ್ಛತೆ ಮತ್ತು ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ತಂಬಾಕು ಸೇವನೆಯ ದುಶ್ಚಟ ಹೆಚ್ಚಳದಿಂದ ಸಾವು ನೋವು ಪ್ರಕರಣಗಳು ಏರಿಕೆ ಕಾಣುತ್ತಿವೆ. ಇದಕ್ಕೆ ವಿಶ್ವದಾದ್ಯಂತ ಜಾಗೃತಿ ಮೂಡಿಸಲು ಪ್ರತಿ ವರ್ಷ ಮೇ 31ರಂದು ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸಲಾಗುತ್ತಿದ್ದು, ತಂಬಾಕು ಪರಿಸರಕ್ಕೆ ಮಾರಕ ಎಂಬುದು ಪ್ರಸಕ್ತ ಸಾಲಿನ ಘೋಷ್ಯ ವಾಕ್ಯವಾಗಿದೆ ಎಂದರು.
ತಂಬಾಕು ಸೇವನೆಯಿಂದ ಮನುಷ್ಯನ ಆರೋಗ್ಯ ಹದಗೆಡುತ್ತದೆ. ಇದು ಪರಿಸರ ಹಾನಿಗೂ ಕಾರಣವಾಗುತ್ತದೆ. ಪ್ರತಿ ವರ್ಷ 7.66.571 ಮೆಟ್ರಿಕ್ ಟನ್ ನಷ್ಟು ಸಿಗರೇಟ್ ತುಂಡುಗಳಿಂದ ತ್ಯಾಜ್ಯವು ಪರಿಸರದಲ್ಲಿ ವಿಲೀನಗೊಳ್ಳುತ್ತಿದೆ. ಸಿಗರೇಟ್ ತುಂಡುಗಳಲ್ಲಿರುವ ನಿಕೋಟಿನ್, ಲೆಡ್, ಪ್ಲಾಸ್ಟಿಕ್ ಸೇರಿ ಇತರ ವಸ್ತುಗಳು ನೀರನ್ನು ಸೇರಿ ಕಲುಷಿತಗೊಳಿಸುತ್ತಿವೆ. ಇದರಿಂದ ನೀರಿನಲ್ಲಿನ ಜಲಚರಗಳು, ನೀರನ್ನು ಸೇವಿಸುವ ಪ್ರಾಣಿ ಪಕ್ಷಿಗಳಿಗೂ ತೊಂದರೆಯಾಗುತ್ತಿದೆ ಎಂದರು.
ಪ್ರತಿ ವರ್ಷ ವಿಶ್ವದಲ್ಲಿ 6 ಟ್ರಿಲಿಯನ್ ಸಿಗರೇಟು ಉಪಯೋಗಿಸಲಾಗುತ್ತಿದೆ ಎಂಬುದಾಗಿ ವರದಿ ಹೇಳಿದೆ. ಇನ್ನು ವಾತವರಣದಲ್ಲಿ ಮಾರಕ ಇಂಗಾಲದ ಡೈ ಆಕ್ಸೈಡ್ ಹೆಚ್ಚಾಗಿ ಹವಾಮಾನ ಬದಲಾವಣೆಯಾಗುತ್ತಿದೆ ಎಂದರು.
ಆರೋಗ್ಯ ಇಲಾಖೆಯ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಯಲ್ಲಾ ರಮೇಶ್ ಬಾಬು ಮಾತನಾಡಿ, ಮಾರುಕಟ್ಟೆಯಲ್ಲಿ ಮಾರಕ ತಂಬಾಕು ಉತ್ಪನ್ನಗಳ ಬೆಲೆ ದುಬಾರಿಯಾಗುತ್ತಿದ್ದರೂ ಜನರು ಹೆಚ್ಚಿಗೆ ಖರೀದಿಸಲು ಮುಂದಾಗುತ್ತಿರುವುದು ದುರದೃಷ್ಟಕರ. ದುಶ್ಚಟಗಳು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕೆಡಿಸುತ್ತದೆ. ಹಾಗೆಯೇ ಪರೋಕ್ಷವಾಗಿ ಸಮಾಜದಲ್ಲಿ ಅಶಾಂತಿಯುತ ವಾತಾವರಣ ನಿರ್ಮಾಣಕ್ಕೂ ಕಾರಣವಾಗುತ್ತದೆ ಎಂದರು.
ತಂಬಾಕು ಮನುಷ್ಯನ ಜೀವನಕ್ಕೆ ಅಪಾಯ ಎನ್ನುವುದು ಎಲ್ಲರಿಗೂ ತಿಳಿದಿದೆ. ಆದರೂ ದುಶ್ಚಟಗಳ ಪ್ರಭಾವದಿಂದ ಹಲವರಿಗೆ ದೂರವಿರಲು ಸಾಧ್ಯವಾಗುತ್ತಿಲ್ಲ. ಯುವಕರು ಕ್ಷಣಿಕ ಸುಖಕ್ಕಾಗಿ ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ಉಜ್ವಲ ಭವಿಷ್ಯದ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಹಲವು ಜಾಗೃತಿ ಕಾರ್ಯಕ್ರಮಗಳ ನಡುವೆಯೂ ದೇಶದಲ್ಲಿ ಶೇ.100ರಷ್ಟು ತಂಬಾಕು ಉತ್ಪನ್ನಗಳ ಸೇವನೆ ಮತ್ತು ಬಳಕೆ ನಿಂತಿಲ್ಲ. ಇದರಿಂದ ದುಷ್ಪರಿಣಾಮಗಳ ಬಗ್ಗೆ ಜನರಿಗೆ ಹೆಚ್ಚಿಗೆ ತಿಳಿಸುವ ಕೆಲಸವಾಗಬೇಕು ಎಂದರು.
ಭಾರತೀಯ ವೈದ್ಯಕೀಯ ಸಂಘದ ಪದಾಧಿಕಾರಿ ಡಾ.ವಿಜಯಾ, ಆಶಾ ಫೌಂಡೇಶನ್ ಸಂಚಾಲಕಿ ಮಂಚನಬಲೆ ಆಶಾ ಮತ್ತಿತರರು ಇದ್ದರು.
ಸ್ವಚ್ಛತಾ ಕಾರ್ಯ:ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರವಾಸೋದ್ಯಮ ಇಲಾಖೆ, ತೋಟಗಾರಿಕೆ ಇಲಾಖೆ, ನಿಸರ್ಗ ಸೊಸೈಟಿ, ಕೂರ್ ಸಂಸ್ಥೆ, ಆಶಾ ಫೌಂಡೇಶನ್, ಸೌಖ್ಯ ಸಂಜೀವಿನಿ ಸಂಸ್ಥೆಗಳ ನೇತೃತ್ವದಲ್ಲಿ ಪ್ರವಾಸಿ ತಾಣ ನಂದಿ ಗಿರಿಧಾಮದಲ್ಲಿ ಸ್ವಚ್ಚತಾ ಕಾರ್ಯ ಕೈಗೊಳ್ಳಲಾಯಿತು.
ತಂಬಾಕು ವಿರೋಧಿ ಜಾಗೃತಿ:ಸಂಘ ಸಂಸ್ಥೆಗಳ ಸ್ವಯಂ ಸೇವಕರು ಬೀಡಿ, ಸಿಗೇರೇಟ್ ಹಾಗೂ ಇತರ ತಂಬಾಕಿನ ಉತ್ಪನ್ನಗಳನ್ನು ಸೇವಿಸದಂತೆ ಅರಿವು ಮೂಡಿಸಿದರು. ನಾವು ಮತ್ತು ನಮ್ಮ ಸಮಾಜ ಆರೋಗ್ಯವಂತಾಗಿರಲು ತಂಬಾಕು ಸೇವನೆ ಮಾಡುವುದಿಲ್ಲ. ಚಿಕ್ಕಬಳ್ಳಾಪುರವನ್ನು ತಂಬಾಕು ರಹಿತ ಜಿಲ್ಲೆಯನ್ನಾಗಿಸಲು ಪ್ರತಿಯೊಬ್ಬರು ಕೈ ಜೋಡಿಸಬೇಕು ಎಂದು ಸಲಹೆ ನೀಡಿದರು.