ದುಶ್ಚಟ ಭಿಕ್ಷೆಗೆ ಜೋಳಿಗೆ ಹಿಡಿದ ಭಾಲ್ಕಿ ಶ್ರೀ

talwada
Published on

ಭಾಲ್ಕಿ: ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಶುಕ್ರವಾರ ತಾಲೂಕಿನ ತಳವಾಡ ಗ್ರಾಮದಲ್ಲಿ ಜೋಳಿಗೆಯನ್ನು ಹಿಡಿದು ನಾಲ್ಕೈದು ಗಂಟೆ ಸುತ್ತಾಡಿ ಜನರಲ್ಲಿರುವ ದುಶ್ಚಟ, ದುರ್ಗುಣಗಳ ಭಿಕ್ಷೆ ಕೇಳಿದರು.

ಜನರಲ್ಲಿನ ದುಶ್ಚಟಗಳ ನಿವಾರಣೆಗಾಗಿ ಪಟ್ಟದ್ದೇವರು `ದುರ್ಗುಣದ ಭಿಕ್ಷೆ-ಸನ್ಮಾರ್ಗದ ದೀಕ್ಷೆ' ಎನ್ನುವ ವಿನೂತನ ಅಭಿಯಾನವನ್ನು ನಡೆಸುತ್ತಿದ್ದಾರೆ. ಆಗಾಗ್ಗೆ ವಿವಿಧ ಗ್ರಾಮಗಳಲ್ಲಿ ಸಂಚರಿಸಿ ಜನರಿಗೆ ಕೆಟ್ಟ ವ್ಯಸನದಿಂದ ಮುಕ್ತಗೊಳಿಸುತ್ತಿದ್ದಾರೆ. ಇದರ ಅಂಗವಾಗಿ ತಳವಾಡ ಗ್ರಾಮದಲ್ಲಿ ಸುತ್ತಾಡಿ ಅನೇಕರಿಗೆ ದುಶ್ಚಟಗಳಿಂದ ದೂರವಿರುವ ಸಂಕಲ್ಪ ಮಾಡಿಸಿದರು. ಅವರಲ್ಲಿನ ಕೆಟ್ಟ ವ್ಯಸನಗಳನ್ನು ಜೋಳಿಗೆಯಲ್ಲಿ ಹಾಕಿಸಿಕೊಂಡು ಉತ್ತಮ ಸಂಸ್ಕಾರದ ದೀಕ್ಷೆ ಕೊಟ್ಟರು.

ಪಟ್ಟದ್ದೇವರು ಗ್ರಾಮಕ್ಕೆ ಹೋಗುತ್ತಲೇ ಸ್ಥಳೀಯರು ಭಕ್ತಿ ಭಾವದಿಂದ ಬರಮಾಡಿಕೊಂಡರು. ವಿವಿಧೆಡೆ ಸುತ್ತಾಡುತ್ತಿದ್ದಾಗ ಅನೇಕ ಮಹಿಳೆಯರು ಶ್ರೀಗಳ ಜೋಳಿಗೆ ಅಭಿಯಾನ ಕಂಡು ಸಂಭ್ರಮಪಟ್ಟರು. ಕೆಲವರು ಮನೆಯಲ್ಲಿದ್ದವರಲ್ಲಿನ ಕೆಟ್ಟ ವ್ಯಸನಿಗಳಿಗೆ ಹೊರಗಡೆ ತಂದು ಶ್ರೀಗಳ ಎದುರು ನಿಲ್ಲಿಸಿದರು. ಶ್ರೀಗಳು ಇವರೊಂದಿಗೆ ಸಮಾಲೋಚಿಸಿ, ದುರ್ಗುಣಗಳಿಂದ ದೂರವಿರುವ ನಿಟ್ಟಿನಲ್ಲಿ ಮೌಲ್ಯದ ವಿಚಾರ ಹಂಚಿಕೊಂಡು ಅವರ ಮನ ಪರಿವರ್ತನೆಗೆ ಪ್ರಯತ್ನಿಸಿದರು. ಶ್ರೀಗಳ ಮಾತಿನಿಂದ ಪ್ರಭಾವಿತ ಹಲವರು, ಇಂದಿನಿಂದ ನಾನು ಎಲ್ಲ ದುಶ್ಚಟ ಬಿಟ್ಟು, ಉತ್ತಮನಾಗುವೆ ಎಂದು ಸಂಕಲ್ಪ ಮಾಡಿದರು. ಕೆಲವರು ತಮ್ಮಲ್ಲಿನ ಬೀಡಿ, ಸಿಗರೇಟ್, ತಂಬಾಕು, ಗುಟ್ಕಾ ಸಹ ಶ್ರೀಗಳ ಜೋಳಿಗೆಗೆ ಹಾಕಿದರು.

ಮದ್ಯಪಾನ, ಮಾದಕ ದ್ರವ್ಯಗಳ ಸೇವನೆಯಿಂದ ಮನುಷ್ಯ ಮಾನಸಿಕ ಖಿನ್ನತೆಗೆ ಒಳಗಾಗುತ್ತಾನೆ. ದೈಹಿಕ ಶಕ್ತಿಯೂ ಕುಗ್ಗಿ, ಆರೋಗ್ಯ ಹಾಳಾಗುತ್ತದೆ. ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ದುಶ್ಚಟಗಳಿಂದ ಎಲ್ಲರೂ ದೂರವಿರಬೇಕು. ಮಕ್ಕಳ ಮೇಲೆ ಪಾಲಕರು ಹೆಚ್ಚಿನ ನಿಗಾ ಇರಿಸಿ ಅವರಿಗೆ ಉತ್ತಮ ಸಂಸ್ಕಾರ ನೀಡಲು ಶ್ರೀಗಳು ಸಲಹೆ ನೀಡಿದರು.

ಡಿವೈಎಸ್ಪಿ ಡಾ. ದೇವರಾಜ ಮಾತನಾಡಿ, ಉತ್ತಮ ಆರೋಗ್ಯ, ಚಾರಿತ್ರ್ಯ ಮೈಗೂಡಿಸಿಕೊಂಡು ಸುಂದರ ಬದುಕು ಸಾಗಿಸಬೇಕೆಂಬ ಆಶಯದಿಂದ ಶ್ರೀಗಳು ನಡೆಸುತ್ತಿರುವ ಅಭಿಯಾನ ಮಾದರಿಯಾಗಿದೆ ಎಂದರು.

ಹಿರೇಮಠದ ಆಡಳಿತಧಿಕಾರಿ ಮೋಹನರೆಡ್ಡಿ, ಪ್ರಮುಖರಾದ ನೂರಂದಪ್ಪ, ವಿಜಯಕುಮಾರ ಯರನಳ್ಳೆ, ಸಂತೋಷ ಇನಾಮತೆ, ಮಹಾಲಿಂಗಯ್ಯಾ ಸ್ವಾಮಿ, ಬಸವರಾಜ ಕಾರಾಮುಂಗೆ, ಸಿದ್ರಾಮ ಪಾಟೀಲ್, ಸುಧಾಕರ ಬಡಗೆ, ಉಮಾಕಾಂತ , ಗಣಪತಿ ಪವಾರ್, ಕಾರ್ತಿಕಯ್ಯ ಸ್ವಾಮಿ, ನಂದಕುಮಾರ ಚಿಕಲಚಂದೆ, ವಿಜಯಕುಮಾರ ರಾಜಾಪೂರೆ, ಸಿದ್ರಾಮ ರಾಜಾಪೂರೆ ಇತರರಿದ್ದರು.

ವ್ಯಸನಮುಕ್ತ, ಸುಸಂಸ್ಕೃತ, ಸುಂದರ ಸಮಾಜ ನಿರ್ಮಾಣಕ್ಕೆ ಸಮಾಜದ ಪ್ರತಿಯೊಬ್ಬರೂ ಶ್ರಮಿಸಬೇಕು. ಉತ್ತಮ ಚಟ ನಮ್ಮದಿದ್ದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ದುರ್ಗುಣ ಬಿಡಿಸುವ ಜೋಳಿಗೆ ಭಿಕ್ಷೆ ನಿರಂತರ ನಡೆಯಲಿದೆ.| ಶ್ರೀ ಗುರುಬಸವ ಪಟ್ಟದ್ದೇವರು,ಹಿರೇಮಠ ಪೀಠಾಧಿಪತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net