ದುಶ್ಚಟ ಬಿಟ್ಟು ಉತ್ತಮ ಜೀವನ ನಡೆಸಿ; ಮಾಜಿ ಸಚಿವ ಶಿವರಾಜ ತಂಗಡಗಿ ಸಲಹೆ

2108-SDP-SHARANAPPA 1
Published on

ಸಿದ್ದಾಪುರ: ಕುಡಿತದ ಚಟದಿಂದ ಅನೇಕ ಕುಟುಂಬಗಳು ಬೀದಿಗೆ ಬಂದಿದ್ದು, ದುಶ್ಚಟ ಕೈಬಿಟ್ಟು ಉತ್ತಮ ಬಾಳ್ವೆ ನಡೆಸಬೇಕು ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಇಲ್ಲಿನ ಎಪಿಎಂಸಿ ಕಲ್ಯಾಣ ಮಂಟಪದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಕಾರಟಗಿ ತಾಲೂಕು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 1,570ನೇ ಮದ್ಯವರ್ಜನ ಶಿಬಿರದ ಸಮಾರೋಪದಲ್ಲಿ ಮಾತನಾಡಿದರು. ಪ್ರತಿಯೊಬ್ಬರೂ ಸಮಾಜಮುಖಿ ಹಾಗೂ ಸಂತಸದ ಜೀವನ ನಡೆಸಬೇಕು. ಕುಡಿತಕ್ಕೆ ಬಲಿಯಾದರೆ ಬದುಕು ಬೀದಿ ಪಾಲಾಗುತ್ತದೆ. ಕುಡಿತ ಬಿಡಿಸುವ ಉದ್ದೇಶದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮದ್ಯವರ್ಜನ ಶಿಬಿರ ನಡೆಸುತ್ತಿರುವುದು ಶ್ಲಾಘನೀಯ. ಅನೇಕ ಬಡ ಕುಟುಂಬಗಳಿಗೆ ಸಹಕಾರಿಯಾಗಿದೆ. ಇನ್ಮುಂದೆ ಪ್ರತಿಯೊಬ್ಬ ಶಿಬಿರಾರ್ಥಿ ಸುಂದರ ಜೀವನ ನಡೆಸಬೇಕು ಎಂದರು.
ಕಾರ್ಯಕ್ರಮಕ್ಕೂ ಮುನ್ನ ಶಿಬಿರಾರ್ಥಿಗಳು ಹಾಗೂ ಜನರನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು. ಬಳಿಕ ಕುಡಿತದ ಚಟ ಬಿಡುವುದಾಗಿ 56 ಜನ ಶಿಬಿರಾರ್ಥಿಗಳು ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ಹೆಸರಿನ ಮೇಲೆ ಪ್ರತಿಜ್ಞೆ ಮಾಡಿದರು. ಜಿಪಂ ಮಾಜಿ ಉಪಾಧ್ಯಕ್ಷ ಬಸವರಾಜಪ್ಪ, ಜನಜಾಗೃತಿ ಯೋಜನಾಧಿಕಾರಿ ಮಾಧವ ನಾಯಕ್, ಕಾರಟಗಿ ತಾಲೂಕು ಯೋಜನಾಧಿಕಾರಿ ಕಾಂತಪ್ಪ ಎಂ.ಕೆ, ಗ್ರಾಪಂ ಸದಸ್ಯರಾದ ಮಂಜುನಾಥ ಮಾಲಿ ಪಾಟೀಲ್, ಚಂದ್ರಶೇಖರ, ಮುಖಂಡರಾದ ಶೈಲಜಾ ಹಿರೇಮಠ, ಪುಷ್ಪಾಂಜಲಿ ಗುನ್ನಾಳ, ಬೀರಪ್ಪ, ಮಲ್ಲಿಕಾರ್ಜುನ ಹೊಸಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net