

ಹಾಸನ: ದುರ್ಬಲ ವರ್ಗದವರ ಆಶಾಕಿರಣವಾಗಿದ್ದ ಜಗಜೀವನ ರಾಂ ಅವರ ಕಾಲಾವಧಿಯಲ್ಲಿ ಬಡವರಪರ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದರು. ನೀರಾವರಿ ಸೌಲಭ್ಯ, ಬಿತ್ತನೆ ಬೀಜಗಳು, ರಸಗೊಬ್ಬರವನ್ನು ಎಲ್ಲರಿಗೂ ನೀಡಬೇಕೆನ್ನುವ ಆಶಯ ಅವರಲ್ಲಿತ್ತು. ಅವರ ಕಾಲದ ಯೋಜನೆಗಳು ಇಂದಿಗೂ ಕೂಡ ಚಾಲ್ತಿಯಲ್ಲಿದೆ ಎಂದು ಕಾಂಗ್ರೆಸ್ ಮುಖಂಡ ಬನವಾಸೆ ರಂಗಸ್ವಾಮಿ ಹೇಳಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಬಾಬು ಜಗಜೀವನ ರಾಂ ಅವರ 117ನೇ ಜನ್ಮದಿನದ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ನಂತರ ಮಾತನಾಡಿದ ಅವರು, ನಮ್ಮ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕೂಡ ಈ ಸೌಲಭ್ಯವನ್ನು ಸರ್ಕಾರಗಳು ನೀಡುತ್ತಾ ಬಂದಿವೆ. ಬಾಬು ಜಗಜೀವನ ರಾಂ ನೀಡಿರುವ ಎಲ್ಲಾ ಸವಲತ್ತುಗಳು ಮತ್ತು ಅವರ ಆಶಯಗಳು ಪ್ರಸ್ತುತದಲ್ಲೂ ಜನರಿಗೆ ತಲುಪುತ್ತಿವೆ. ತಳ ಮಟ್ಟದ ಎಲ್ಲರಿಗೂ ಸೌಲಭ್ಯ ಸಿಗಬೇಕು ಎನ್ನುವ ಆಶಯದಂತೆ ನಾವೆಲ್ಲಾ ಕೆಲಸ ಮಾಡೋಣ ಎಂದು ಕರೆ ಕೊಟ್ಟರು.
ಈ ವೇಳೆ ಕಾಂಗ್ರೆಸ್ ಮುಖಂಡರಾದ ಮಲ್ಲಿಗೆವಾಳು ದ್ಯಾವಪ್ಪ, ಮಂಜುನಾಥ್ ಶರ್ಮ, ರಘು ದಾಸರಕೊಪ್ಪಲು, ದಿನೇಶ್, ರಾಮಚಂದ್ರ, ಶಿವಕುಮಾರ್ ಇತರರು ಇದ್ದರು.