

ಚಿತ್ರದುರ್ಗ:ನಗರದಲ್ಲಿ ದುರ್ಗೋತ್ಸವ ಆಚರಿಸಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಕರುನಾಡ ವಿಜಯಸೇನೆ ಕಾರ‌್ಯಕರ್ತರು ಡಿಸಿ ಕಚೇರಿ ಬಳಿ ಶುಕ್ರವಾರ ಪ್ರತಿಭಟಿಸಿದರು.
ರಾಜಾವೀರ ಮದಕರಿನಾಯಕ, ವೀರವನಿತೆ ಒನಕೆ ಓಬವ್ವ ನಾಡು ಚಿತ್ರದುರ್ಗದಲ್ಲಿ ದುರ್ಗೋತ್ಸವ ಆಚರಿಸಿ ವರ್ಷಗಳೇ ಉರುಳಿವೆ. ಮೈಸೂರು ದಸರಾ, ಹಂಪಿ, ಕೊಡಗು, ಕಿತ್ತೂರು ಉತ್ಸವ ಆಚರಣೆಗೆ ಸರ್ಕಾರ ಕೋಟ್ಯಂತರ ರೂ.ವ್ಯಯಿಸುತ್ತಿರುವ ಸರ್ಕಾರ ದುರ್ಗೋತ್ಸವಕ್ಕೆ ಆಸಕ್ತಿ ತೋರಿಸುತ್ತಿಲ್ಲ. ಜನಪ್ರತಿನಿಧಿಗಳ ನಿರಾಸಕ್ತಿ ಇದಕ್ಕೆ ಕಾರಣವಾಗಿದೆ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.
ವಿಶ್ವಹಿಂದು ಪರಿಷತ್, ಬಜರಂಗದಳದವರು ನಗರದಲ್ಲಿ ಹಲವು ವರ್ಷಗಳಿಂದ ಹಿಂದು ಮಹಾ ಗಣಪತಿ ಉತ್ಸವವನ್ನು ಆಚರಿಸಿ ಕೊಂಡು ಬರಲು ಸಾಧ್ಯವಾಗುವುದಾದರೆ, ಸರ್ಕಾರಕ್ಕೆ ದುರ್ಗೋತ್ಸವ ಆಚರಿಸಲು ಆಗದೇ ಎಂದು ಪ್ರಶ್ನಿಸಿದರು. ಡಿಸೆಂಬರ್‌ನೊಳಗೆ ದುರ್ಗೋತ್ಸವ ಆಚರಿಸಬೇಕೆಂದು ಒತ್ತಾಯಿಸಿ ಎಡಿಸಿ ಬಿ.ಟಿ.ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.
ಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್, ವೀಣಾಗೌರಣ್ಣ, ರತ್ನಮ್ಮ, ಎಸ್.ಗೋಪಿನಾಥ್, ಸಿ.ಜಗದೀಶ್, ಮುಜಾಹಿದ್, ಅಖಿಲೇಶ್, ಅವಿನಾಶ್, ಯರ‌್ರಿಸ್ವಾಮಿ, ನಾಗರಾಜ್ ಮುತ್ತು, ಕಮಲ, ಸುರೇಶ್, ಹರೀಶ್‌ಕುಮಾರ್ ಇದ್ದರು.