ನವರಾತ್ರಿ ಸಂದರ್ಭದಲ್ಲಿ 9 ದಿನಗಳ ಕಾಲ ಜರುಗುವ ದುರ್ಗಾಮಾತಾ ದೌಡ್(ಓಟ)ಕ್ಕೆ ಸೋಮವಾರ ಬೆಳಗ್ಗೆ ನಗರದ ಶಿವಾಜಿ ಉದ್ಯಾನದಲ್ಲಿ ಚಾಲನೆ ನೀಡಲಾಯಿತು.
ಬಳಿಕ ಎಸ್‌ಪಿಎಂ ರಸ್ತೆ, ಮಹಾತ್ಮಾ ಫುಲೆ ರಸ್ತೆ, ಶಾಸ್ತ್ರೀ ನಗರ, ಗೂಡ್‌ಶೆಡ್ ರಸ್ತೆ, ಮಹಾದ್ವಾರ ರಸ್ತೆ ಮತ್ತು ಸುತ್ತಮುತ್ತ ಸಂಚರಿಸಿದ ದೌಡ್ ಕಪಿಲೇಶ್ವರ ದೇವಸ್ಥಾನ ಬಳಿ ಮುಕ್ತಾಯಗೊಂಡಿತು.
9 ದಿನ ನಿತ್ಯ ಒಂದು ಏರಿಯಾದಿಂದ ಆರಂಭಗೊಳ್ಳುವ ಈ ಓಟ ಕೆಲ ಬಡಾವಣೆಗಳಲ್ಲಿ ಸಂಚರಿಸಿ ಒಂದು ದೇವಸ್ಥಾನದ ಬಳಿ ಸಮಾರೋಪಗೊಳ್ಳುತ್ತದೆ. ಮರುದಿನ ಅಲ್ಲಿಂದ ಪಕ್ಕದ ಬಡಾವಣೆಗಳಲ್ಲಿ ಸಂಚರಿಸುತ್ತದೆ.
ನೂರಾರು ಯುವಕ, ಯುವತಿಯರು ಈ ಓಟದಲ್ಲಿ ಬರಿಗಾಲಿನಲ್ಲಿ ಪಾಲ್ಗೊಳ್ಳುವುದು ವಿಶೇಷ. ದೌಡ್ ಸಾಗುವ ಬೀದಿಗಳನ್ನು ರಂಗೋಲಿ ಹಾಕಿ ವಿಶೇಷವಾಗಿ ಆಲಂಕರಿಸಲಾಗಿತ್ತು. ಅಲ್ಲಲ್ಲಿ ವೀರ ಪುರುಷ ಮತ್ತು ವೀರ ವಣನಿತೆಯರ ವೇಷಭೂಷಣದಲ್ಲಿ ಮಕ್ಕಳು ಗಮನ ಸೆಳೆದರು. ಕೆಲ ಬಡಾವಣೆಗಳಲ್ಲಿ ಪುಷ್ಪವೃಷ್ಟಿಗೈಯಲಾಯಿತು.