ದುರ್ಗಾಪರಮೇಶ್ವರಿ ದೇವಿ ಮೆರವಣಿಗೆ ಅದ್ದೂರಿ

Durgaparameshwari
Published on

ಚಿತ್ರದುರ್ಗ: ತಾಲೂಕಿನ ಐನಹಳ್ಳಿ ಕುರುಬರಹಟ್ಟಿ ಗ್ರಾಮದ ಪ್ರಮುಖ ಬೀದಿಗಳಲ್ಲಿ 101 ಕುಂಭಗಳೊಂದಿಗೆ ಶ್ರೀ ದುರ್ಗಾಪರಮೇಶ್ವರಿ ದೇವಿಯ ಅದ್ದೂರಿ ಮೆರವಣಿಗೆ ಶುಕ್ರವಾರ ಜರುಗಿತು.

ಗ್ರಾಮದ ಸಿದ್ಧಾರೂಢ ಶಾಖಾಶ್ರಮದಲ್ಲಿ ಆರಂಭವಾಗಿರುವ ದೇವಿಯ 27ನೇ ವರ್ಷದ ಜಾತ್ರಾ ಮಹೋತ್ಸವ ಅಂಗವಾಗಿ ವಿವಿಧ ಪೂಜಾ ವಿಧಿ ವಿಧಾನಗಳು ನೆರವೇರಿದವು.

ದೇಗುಲದಿಂದ ಹೊರಟ ದೇವಿಯ ಉತ್ಸವ ಮೂರ್ತಿ ಹೊಸಮನೆಗೆ ತಲುಪಿತು. ನಂತರ ಅಲ್ಲಿಂದ ಮೆರವಣಿಗೆ ಆರಂಭವಾಯಿತು. ಬೀರಲಿಂಗೇಶ್ವರ ಸ್ವಾಮಿ ದೇವಸ್ಥಾನ ಸಂಘದ ಡೊಳ್ಳು ಕುಣಿತ, ಐನಹಳ್ಳಿ ಕುರುಬರಹಟ್ಟಿ ಗ್ರಾಮದ ಕೋಲಾಟ ಸೇರಿ ವಿವಿಧ ಜಾನಪದ ಕಲಾತಂಡಗಳು ಮೆರವಣಿಗೆಗೆ ಮೆರುಗು ನೀಡಿದವು.

ಜಾತ್ರೆ ಅಂಗವಾಗಿ ದೇವಿಯ ಉತ್ಸವ ಮೂರ್ತಿಗೆ ವಿವಿಧ ಬಗೆಯ ಪುಷ್ಪಗಳಿಂದ ವಿಶೇಷ ಅಲಂಕಾರ ಸೇವೆ ನೆರವೇರಿತು. ಗರ್ಭಗುಡಿಯಲ್ಲಿನ ಮೂರ್ತಿ ಹೊಂಬಾಳೆ, ಕಮಲ, ಗುಲಾಬಿ, ಸುಗಂಧರಾಜ, ಮಲ್ಲಿಗೆ, ಕನಕಾಂಬರ, ಸೇವಂತಿ, ಚೆಂಡು, ಪತ್ರೆ ಇನ್ನಿತರೆ ಹೂವಿನ ಹಾರಗಳಿಂದ ವೈಭವೋಪೇತವಾಗಿ ಸಿಂಗರಿಸಿದ್ದು, ಭಕ್ತರನ್ನು ಆಕರ್ಷಿಸಿತು.

ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮೀಜಿ ಅವರ ಸಮ್ಮುಖದಲ್ಲಿ ಪೂರ್ಣಾಹುತಿ ಕಾರ್ಯಕ್ರಮ, ಪ್ರವಚನ ಜರುಗಿತು. ಪಾದಪೂಜೆ, ಮಂಗಳಾರತಿ, ತೀರ್ಥ ಪ್ರಸಾದ ವಿತರಿಸಲಾಯಿತು. ಬಳಿಕ ನೆರೆದಿದ್ದ ಭಕ್ತರು ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡರು.

ಸಂಜೆ ದುರ್ಗಾಪರಮೇಶ್ವರಿ ದೇವಿಯ ಲಲಿತಾ ಸಹಸ್ರನಾಮ, ಕುಂಕುಮಾರ್ಚನೆ ಸೇರಿ ಇನ್ನಿತರೆ ಪೂಜಾ ಕೈಂಕರ್ಯ ಶಾಸ್ತ್ರೋಕ್ತವಾಗಿ ನೆರವೇರಿದವು. ರಾತ್ರಿ ಆಯಿತೋಳು ಚಂದ್ರಪ್ಪ ಮತ್ತು ಸಂಗಡಿಗರಿಂದ ಭಕ್ತಿ ರಸಮಂಜರಿ ಕಾರ್ಯಕ್ರಮ ನಡೆಯಿತು.

ಮೇ 11ರಂದು ಬೆಳಗ್ಗೆ 10.30ರಿಂದ 12.30ರವರೆಗೆ ದೇವಿಯ ಓಕಳಿ ಉತ್ಸವ ಜರುಗಲಿದೆ ಎಂದು ಹಟ್ಟಿಯ ಸಿದ್ಧಾರೂಢ ಸೇವಾ ಸಮಿತಿ ಪದಾಧಿಕಾರಿಗಳು, ಭಕ್ತ ಮಂಡಳಿ, ಗ್ರಾಮಸ್ಥರು ತಿಳಿಸಿದ್ದಾರೆ. ಗುರುವಾರ ದೇವಿಯ ಗಂಗಾಪೂಜೆ ಮತ್ತು ಜಾತ್ರೆಯ ಧ್ವಜಾರೋಹಣದಲ್ಲೂ ನೂರಾರು ಭಕ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net