ದುರ್ಗಾದೇವಿ ದುರ್ಗೋತ್ಸವಕ್ಕೆ ಶ್ರದ್ಧಾಭಕ್ತಿಯಿಂದ ಚಾಲನೆ

Durgadevi
Published on

ಚಿತ್ರದುರ್ಗ: ಆನೆಬಾಗಿಲು ಸಮೀಪದ ಸುವೃಷ್ಠಿ ಪ್ರಾಣ ದೇವರ ಆವರಣದಲ್ಲಿ ಹಿಂದು ಘರ್ಜನೆ ಸೇನಾ ಸಂಸ್ಥಾನದ ವತಿಯಿಂದ ದುರ್ಗಾದೇವಿ ಮೂರ್ತಿಯನ್ನು ಭಾನುವಾರ ಪ್ರತಿಷ್ಠಾಪಿಸಿದ್ದು, ಈ ಮೂಲಕ ನವರಾತ್ರಿ ಉತ್ಸವಕ್ಕೆ ಚಾಲನೆ ದೊರೆಯಿತು.

ಅಷ್ಟ ಕೈಗಳಲ್ಲಿ ತ್ರಿಶೂಲ, ಗಧೆ, ಕತ್ತಿ, ಶಂಕ, ಚಕ್ರ, ಬಿಲ್ಲು-ಬಾಣ ಅಸ್ತ್ರಗಳೊಂದಿಗೆ, ಸಿಂಹ ವಾಹನರೂಢಳಾದ ದುರ್ಗಾದೇವಿ ವಿರಾಜಮಾನಳಾಗಿ ಕೂತಿದ್ದು, ಭಕ್ತರಿಗೆ ಅಭಯಹಸ್ತ ನೀಡಿ ಆಶೀರ್ವದಿಸುವ ಮಾದರಿಯ ಮೂರ್ತಿಯೂ ಭಕ್ತರನ್ನು ಆಕರ್ಷಿಸುತ್ತಿದೆ.

ಪುಷ್ಪಾಲಂಕಾರದೊಂದಿಗೆ ಕಂಗೊಳಿಸುತ್ತಿರುವ ಮೂರ್ತಿಯನ್ನು ನೂರಾರು ಭಕ್ತರು ಕಣ್ತುಂಬಿಕೊಂಡು ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿ, ಪ್ರಾರ್ಥಿಸಿದರು. ಕಲಾಂಜಲಿ ಮೆಲೋಡಿಸ್ ತಂಡದಿಂದ ವಾದ್ಯಗೋಷ್ಠಿ ನಡೆಯಿತು.

ದೇವಿಯ ಸನ್ನಿಧಿ ಪಕ್ಕದಲ್ಲಿ 16ರಂದು ಸಪ್ತಗಿರಿ ಭಜನಾ ಮಂಡಳಿಯಿಂದ ದೇವರ ನಾಮ, 17ಕ್ಕೆ ನೃತ್ಯ ಸ್ಪರ್ಧೆ, 18ಕ್ಕೆ ಚಿತ್ರದುರ್ಗ ಸಿಂಗರ್ಸ್‌ ಜೋನ್ ತಂಡದಿಂದ ವಾದ್ಯ ಗೋಷ್ಠಿ, 19ಕ್ಕೆ ಹರಟೆ ಕಟ್ಟೆ ಚರ್ಚಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

20ರಂದು ಶ್ರೀಕಾಂತ್ ತಂಡದಿಂದ ಅಷ್ಟಲಕ್ಷ್ಮೀ ಪೂಜೆ, 21ಕ್ಕೆ ಸರಸ್ವತಿ ಪೂಜೆ ಹಾಗೂ ಅಕ್ಷರಾಭ್ಯಾಸ, 22ರಂದು ದುರ್ಗಾಷ್ಟಮಿ ಅಂಗವಾಗಿ ಮೈಸೂರಿನ ದಯಾನಂದ ಶರ್ಮ ತಂಡದಿಂದ ಗಣ, ನವಗ್ರಹ, ಧನ್ವಂತರಿ, ಸುದರ್ಶನ, ನರಸಿಂಹ, ಲಕ್ಷ್ಮೀನಾರಾಯಣ, ಲಲಿತಾ, ದುರ್ಗಾ, ನವ ದುರ್ಗಾ ಹೋಮದ ಪೂರ್ಣಾಹುತಿ ನಂತರ ಭಕ್ತರಿಗೆ ಅನ್ನಸಂತರ್ಪಣೆ ಆಯೋಜಿಸಲಾಗಿದೆ.

23ರಂದು ಆಯುಧ ಪೂಜೆ ಅಂಗವಾಗಿ ಗುರುರಾಜ್ ತಂಡದಿಂದ ಕೊಳಲು ವಾದನ, 24ಕ್ಕೆ ಬನ್ನಿ ಮುಡಿಯುವ ಉತ್ಸವ, ಸಂಜೆ ಭಕ್ತಿಗೀತೆಗಳೊಂದಿಗೆ ದೇವಿಯ ಆರಾಧನೆ. 25ಕ್ಕೆ ನಗರದ ಪ್ರಮುಖ ಬೀದಿಗಳಲ್ಲಿ ದುರ್ಗಾದೇವಿಯ ಶೋಭಾಯಾತ್ರೆ ನಂತರ ಚಂದ್ರವಳ್ಳಿಯಲ್ಲಿ ವಿಸರ್ಜನೆ ನೆರವೇರಲಿದೆ. ದುರ್ಗಾದೇವಿಯ ಸದ್ಭಕ್ತರು 9 ದಿನಗಳ ಪೂಜಾ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಉತ್ಸವ ಯಶಸ್ವಿಗೊಳಿಸಬೇಕು ಎಂದು ಹಿಂದು ಘರ್ಜನೆ ಸೇನಾ ಸಂಸ್ಥಾನ ಅಧ್ಯಕ್ಷ ಸಾಗರ್ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net