

ಹಿರೇಕೆರೂರ: ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಶ್ರೀ ದುರ್ಗಾದೇವಿ ಕೆರೆ ತುಂಬಿಸುವ ಯೋಜನೆ ಯಶಸ್ವಿಯಾಗಿದೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ, ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.
ರಟ್ಟಿಹಳ್ಳಿ ತಾಲೂಕಿನ ತಿಪ್ಪಾಯಿಕೊಪ್ಪ ಸಮೀಪ ಕುಮದ್ವತಿ ನದಿಯಿಂದ ಹಿರೇಕೆರೂರನ ಶ್ರೀ ದುರ್ಗಾದೇವಿ ಕೆರೆಗೆ ನೀರು ಬರುವ ಪಟ್ಟಣದ ಚನ್ನಳ್ಳಿ ರಸ್ತೆಯ ಡೆಲಿವರಿ ಪಾಯಿಂಟ್ ಹತ್ತಿರ ಪ್ರಾಯೋಗಿಕ ಪರೀಕ್ಷೆಯನ್ನು ಅಧಿಕಾರಿಗಳೊಂದಿಗೆ ಸೋಮವಾರ ವೀಕ್ಷಿಸಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಗುಡ್ಡದಮಾದಾಪುರ ಏತ ನೀರಾವರಿ ಯೋಜನೆ ಪೂರ್ಣಗೊಂಡಿದೆ. ನೀರು ತುಂಬಿಸುವ ಈ ಯೋಜನೆಗೆ ಶೀಘ್ರದಲ್ಲಿ ಚಾಲನೆ ನೀಡಲಾಗುವುದು. ಇದರಿಂದ ಅಂತರ್ಜಲ ವೃದ್ಧಿಯಾಗಿ ಹೆಚ್ಚು ಬೆಳೆ ಬೆಳೆಯಲು ಅನುಕೂಲವಾಗಲಿದೆ ಎಂದರು.
ಕೆ.ಜೆ. ಪ್ರತಾಪ, ಜಗದೀಶ ಮುರಡೇಶ್ವರ, ಗುತ್ತಿಗೆದಾರ ವಿಷ್ಣುವರ್ಧನ್ ರೆಡ್ಡಿ, ನೀರಾವರಿ ಇಲಾಖೆ ಅಧಿಕಾರಿಗಳು ಇದ್ದರು.