ದುರ್ಗಾಂಬಿಕಾ ಸನ್ನಿಧಿಯಲ್ಲಿ ಬೆಳಗ್ಗೆ ಎಡೆಜಾತ್ರೆ, ಸಂಜೆ ಮಳೆ ದರ್ಶನ!

pixlr.jpg
Published on

ದಾವಣಗೆರೆ: ಜಿಲ್ಲೆಯಲ್ಲಿ ಮಾಯವಾಗಿದ್ದ ಮಳೆರಾಯನ ಆಗಮನಕ್ಕಾಗಿ ಪ್ರಾರ್ಥಿಸಿ ನಗರದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನ ಟ್ರಸ್ಟ್‌ನಿಂದ ಮಂಗಳವಾರ ಹಮ್ಮಿಕೊಂಡಿದ್ದ ಎಡೆಜಾತ್ರೆ ಸಾಂಗವಾಗಿ ನೆರವೇರಿತು.

ಬೆಳಗ್ಗೆ 6 ಗಂಟೆಯಿಂದಲೇ ಅಮ್ಮನಿಗೆ ವಿಶೇಷ ಪೂಜೆ, ಅಭಿಷೇಕ ನೆರವೇರಿತು. ದುರ್ಗಾಂಬಿಕಾ ದೇವಿಗೆ ಗಜಗೌರಿ ಅಲಂಕಾರ ಮಾಡಲಾಗಿತ್ತು. ಜಾತ್ರೆ ಅಂಗವಾಗಿ ದೇವಸ್ಥಾನ ಬಾಳೆಕಂದು, ಮಾವಿನ ತೋರಣದಿಂದ ಅಲಂಕೃತವಾಗಿತ್ತು.

ಭಕ್ತರು, ಮಹಿಳೆಯರು ಮನೆಗಳಲ್ಲಿ ಮಡಿಯಿಂದಲೇ ತಯಾರಿಸಿದ ಹೋಳಿಗೆ, ಕಡುಬು, ಪಾಯಸ, ಕೇಸರಿಬಾತ್ ಮೊದಲಾದ ಸಿಹಿಭಕ್ಷೃ, ಅನ್ನ, ಮೊಸರುಬತ್ತಿಯನ್ನು ತಂದು, ದೇವಸ್ಥಾನದ ಬಳಿ ಸರದಿ ಸಾಲಿನಲ್ಲಿ ನಿಂತು ಅಮ್ಮನ ಸನ್ನಿಧಿಗೆ ಸಲ್ಲಿಸಿದರು. ಕೆಲವರು ಅಕ್ಕಿ-ಬೇಳೆ, ಬೆಲ್ಲ, ಎಣ್ಣೆ, ಹಣ್ಣುಗಳನ್ನು ಅರ್ಪಿಸಿದರು.

ಜಿಲ್ಲೆಯಲ್ಲಿ ಮಳೆ ಬರಲಿ ಎಂದು ಕೆಲವರು ಬೇಡಿಕೊಂಡರು. ಮತ್ತೆ ಕೆಲವರು ಕಂಕಣಭಾಗ್ಯ ಕೂಡಿಬರಲು, ಮಕ್ಕಳಾಗಲೆಂದು ಪ್ರಾರ್ಥಿಸಿದರು. ಕೆಲವರು ಅನಾರೋಗ್ಯ ಸಮಸ್ಯೆ ನೀಗಿಸುವಂತೆ ನಿವೇದಿಸಿ ಹರಕೆ ಹೊತ್ತರು. ಇಷ್ಟಾರ್ಥ ಈಡೇರಿದರೆ ಸನ್ನಿಧಾನಕ್ಕೆ ಬಂದು ಬೆಳ್ಳಿ ಪಾದ, ತಾಳಿ ಇತ್ಯಾದಿ ಮಾಡಿಸಿಕೊಡುವ ಇಂಗಿತ ಹೇಳಿಕೊಂಡರು.

ವಿವಿಧೆಡೆಗಳಿಂದ ಬಂದ ಜನರಿಗೆ ದೇವಸ್ಥಾನ ಟ್ರಸ್ಟ್‌ನಿಂದ ಯಥಾಪ್ರಕಾರ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಜನರು ತಂದ ಎಲ್ಲ ಎಡೆಯನ್ನು ಭಕ್ತರಿಗೆ ಪ್ರಸಾದದ ರೂಪದಲ್ಲಿ ವಿತರಿಸಲಾಯಿತು.

ದುರ್ಗಾಂಬಿಕಾ ದೇವಿ ಭಕ್ತರ ಸಮಸ್ಯೆಯನ್ನು ಪರಿಹರಿಸುತ್ತಾಳೆ ಎಂಬುದಕ್ಕೆ ಎಡೆಜಾತ್ರೆಗೆ ಬಂದ ಜನರೇ ಸಾಕ್ಷಿ. ಬೆಳಗ್ಗೆಯಿಂದ ಸಂಜೆಯವರೆಗೂ ಜನರ ಬರುವಿಕೆ ನಿಲ್ಲಲಿಲ್ಲ. ಮಳೆಯನ್ನೂ ಲೆಕ್ಕಿಸದೆ ಕೆಲ ಭಕ್ತರು ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿ ದರ್ಶನ ಪಡೆದರು ಎಂದು ದೇವಸ್ಥಾನದ ಟ್ರಸ್ಟಿ ಗೌಡ್ರು ಚನ್ನಬಸಪ್ಪ ಪತ್ರಿಕೆಗೆ ತಿಳಿಸಿದರು.

* ಸಂಜೆ ಮಳೆ ಸಿಂಚನ

ಬೆಳಗ್ಗೆಯಿಂದ ದೇವಿಗೆ ವಿಶೇಷ ಪೂಜೆ, ಎಡೆಜಾತ್ರೆ ನಡೆದರೆ ಸಂಜೆ ನಂತರದಲ್ಲಿ ವಾತಾವರಣ ತಂಪಿಗೆ ಮರಳಿತು. ಕಾಕತಾಳೀಯ ಎಂಬಂತೆ ಗುಡುಗು ಸಿಡಿಲು ಸಹಿತ ಮಳೆಯಾಯಿತು. ಮಳೆಯ ನಡುವೆಯೂ ಭಕ್ತರು ದೇವಸ್ಥಾನಕ್ಕೆ ಧಾವಿಸಿದರು. ಅಮ್ಮನಿಗೆ ಎಡೆ ಸಲ್ಲಿಸಿದ್ದರ ಪರಿಣಾಮ ವರುಣನ ದರ್ಶನವಾಯಿತು ಎಂದು ನೆರೆದಿದ್ದ ಭಕ್ತರು ಹರ್ಷ ವ್ಯಕ್ತಪಡಿಸಿದರು.

--

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net