ದುರ್ಗವನ್ನು ಬರಗಾಲವೆಂದು ಘೋಷಿಸಲು ಪಟ್ಟು

4
Published on

ಚಿತ್ರದುರ್ಗ: ಮಳೆ ಕೊರತೆಯಾಗಿ ಬೆಳೆ ನಷ್ಟವಾದ ಕಾರಣ ಕೂಡಲೇ ಜಿಲ್ಲೆಯನ್ನು ಬರಗಾಲವೆಂದು ಘೋಷಿಸಿ, ಬೆಳೆ ವಿಮೆ ಪರಿಹಾರ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ರಾಜ್ಯ ರೈತಸಂಘ, ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಜಂಟಿಯಾಗಿ ಸೋಮವಾರ ಪ್ರತಿಭಟನೆ ನಡೆಸಿದರು.


ರೈತರು ತೀವ್ರ ಸಂಕಷ್ಟದಲ್ಲಿರುವ ಕಾರಣ ಎಲ್ಲ ಸಾಲ ಮನ್ನಾ ಸೇರಿ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.


ದಿನಕ್ಕೆ 7 ಗಂಟೆ ವಿದ್ಯುತ್ ಪೂರೈಸುವುದಾಗಿ ಘೋಷಿಸಿ, ಸತತ 20 ದಿನಗಳಿಂದಲೂ ಕೇವಲ 3 ಗಂಟೆಯೂ ಸರಿಯಾಗಿ ನೀಡುತ್ತಿಲ್ಲ. ಇದರಿಂದಾಗಿ ಕೊಳವೆಬಾವಿ ನಂಬಿ ಕೃಷಿ, ತೋಟಗಾರಿಕೆಯಲ್ಲಿ ತೊಡಗಿರುವ ರೈತರ ಬೆಳೆಗಳು ಒಣಗುತ್ತಿವೆ. ಆದ್ದರಿಂದ ಅಗತ್ಯ ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಿದರು.


ಭದ್ರಾ ಮೇಲ್ದಂಡೆ ಯೋಜನೆ ತ್ವರಿತವಾಗಿ ಅನುಷ್ಠಾನಗೊಳಿಸಿ ಜಿಲ್ಲೆಯ ಜೀವಜಲದ ಅಕ್ಷಯ ಪಾತ್ರೆ ವಾಣಿವಿಲಾಸ ಸಾಗರ ಜಲಾಶಯ ಹಾಗೂ ಕೆರೆಗಳಿಗೆ ನೀರುಣಿಸುವ ಮೂಲಕ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.


ಬರದ ಹಿನ್ನೆಲೆಯಲ್ಲಿ ಗೋಶಾಲೆ ತೆರೆಯಬೇಕು. ಜಾನುವಾರುಗಳಿಗೆ ಅಗತ್ಯ ಮೇವು ಪೂರೈಸಬೇಕು. ರೈತರ ಗುಳೆ ತಪ್ಪಿಸಲು ಉದ್ಯೋಗ ಖಾತ್ರಿಯಲ್ಲಿ ಕೆಲಸ ನೀಡಬೇಕು. ಸಿರಿಧಾನ್ಯ ಬೆಳೆಗಳಿಗೆ ಪ್ರೋತ್ಸಾಹಧನ ವಿತರಿಸಬೇಕು. ಸಾಲಕ್ಕಾಗಿ ಬ್ಯಾಂಕ್‌ಗಳಿಂದ ಕಿರುಕುಳ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಸರ್ಕಾರಕ್ಕೆ ಕೋರಿದರು.


ರೈತ ಮುಖಂಡರಾದ ಈಚಘಟ್ಟ ಸಿದ್ಧವೀರಪ್ಪ, ಕೆ.ಪಿ.ಭೂತಯ್ಯ, ಹಂಪಯ್ಯನಮಾಳಿಗೆ ಧನಂಜಯ, ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್, ರಾಮರೆಡ್ಡಿ, ಶೇಷಣ್ಣರೆಡ್ಡಿ, ಶಂಕರಲಿಂಗಪ್ಪ, ದಿವ್ಯಾಜ್ಯೋತಿ, ಕೆ.ಸರಸ್ವತಿ, ಬಸವರಾಜು, ರುದ್ರಪ್ಪರೆಡ್ಡಿ, ಮಂಜುನಾಥ್, ಸತೀಶ್, ರವಿಶಂಕರ್, ಸತೀಶ್, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಹಂಪಣ್ಣ, ಎಂ.ಬಿ.ತಿಪ್ಪೇಸ್ವಾಮಿ, ನಾಗರಾಜು, ತಿಪ್ಪೇಸ್ವಾಮಿ, ರೆಹಮಾನ್ ನೂರುಲ್ಲಾ ಸಾಬ್, ರಾಜಣ್ಣ, ದಸ್ತಗಿರ್ ಸಾಬ್, ಗೌಸ್‌ಪೀರ್, ಕುಮಾರಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net