ದುರ್ಗದಲ್ಲೇ ಉಳಿದ ರಾ.ಹೆ. ಗುಣನಿಯಂತ್ರಣ ಕಚೇರಿ

CTD PWD NH QC--------------
Published on

ಡಿಪಿಎನ್ ಶ್ರೇಷ್ಠಿ, ಚಿತ್ರದುರ್ಗ

ಲೋಕೋಪಯೋಗಿ ಇಲಾಖೆ ರಾಷ್ಟ್ರೀಯ ಹೆದ್ದಾರಿ ಗುಣನಿಯಂತ್ರಣ ಉಪವಿಭಾಗದ ಕಚೇರಿಯನ್ನು ಚಿತ್ರದುರ್ಗದಿಂದ ಕಲಬುರಗಿಗೆ ಸ್ಥಳಾಂತರಿಸುವ ನಿರ್ಧಾರವನ್ನು ರಾಜ್ಯಸರ್ಕಾರ ಕೈಬಿಟ್ಟಿದೆ.

ಚಿತ್ರದುರ್ಗದ ಈ ಕಚೇರಿಯು ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಚಿಕ್ಕಮಗಳೂರು, ಉಡುಪಿ, ರಾಯಚೂರು, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಅನುಷ್ಠಾನಗೊಳ್ಳುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಗುಣ ನಿಯಂತ್ರಣ ಪರಿವೀಕ್ಷಣೆ ನಡೆಸುತ್ತಿತ್ತು.

ಇತ್ತೀಚಿನ ವರ್ಷಗಳಲ್ಲಿ ಇಂಜಿನಿಯರಿಂಗ್, ಸಂಗ್ರಹಣೆ ಮತ್ತು ನಿರ್ಮಾಣ(ಉಇ) ಜಾರಿ ಬಳಿಕ ಚಿತ್ರದುರ್ಗದ ಕಚೇರಿ ಮೇಲೆ ಕೆಲಸದ ಒತ್ತಡ ಕಡಿಮೆಯಾಗಿದೆ. 2022-23ನೇ ಸಾಲಿನಲ್ಲಿ ಸಾವಿರಾರು ಕೋಟಿ ರೂ.ವೆಚ್ಚದ ಕಾಮಗಾರಿಗಳಿಂದ ಬೆಂಗಳೂರು, ಹುಬ್ಬಳ್ಳಿ ಉಪವಿಭಾಗಗಳ ಮೇಲೆ ಕಾರ್ಯದೊತ್ತಡ ಅಧಿಕವಾಗಿದೆ ಎಂದು ಪರಿಗಣಿಸಿ, ಚಿತ್ರದುರ್ಗ ಕಚೇರಿಯನ್ನು ಹುದ್ದೆಗಳ ಸಮೇತ ಕಲಬುರಗಿಗೆ ಸ್ಥಳಾಂತರಿಸಲು ರಾಜ್ಯ ಸರ್ಕಾರ ಕಳೆದ ಫೆಬ್ರವರಿಯಲ್ಲಿ ಆದೇಶಿಸಿತ್ತು.

ಇದರಿಂದಾಗಿ ಕಚೇರಿಯಲ್ಲಿದ್ದ 15-20 ಹೊರಗುತ್ತಿಗೆ ನೌಕರರು ಸಂಕಷ್ಟಕ್ಕೆ ಸಿಲುಕಿದ್ದರು. ಇದರ ವ್ಯಾಪ್ತಿಯ ಜಿಲ್ಲೆಗಳನ್ನು ಬೆಂಗಳೂರು ಉಪವಿಭಾಗಕ್ಕೆ ಸೇರ್ಪಡೆಗೊಳಿಸುವ ನಿರ್ಧಾರದಿಂದ ಚಿತ್ರದುರ್ಗ ಕಚೇರಿ ವ್ಯಾಪ್ತಿಯ ಜಿಲ್ಲೆಗಳಲ್ಲಿ ಕಾಮಗಾರಿಗಳ ಗುಣಮಟ್ಟ ಮತ್ತು ತ್ವರಿತ ಅನುಷ್ಠಾನದ ಕುರಿತು ಆತಂಕ ಮೂಡಿಸಿತ್ತು.

ಕಲ್ಯಾಣ ಕರ್ನಾಟಕ ಪ್ರದೇಶದ ಜಿಲ್ಲೆಗಳ ಕಾಮಗಾರಿಗಳ ತ್ವರಿತ ಅನುಷ್ಠಾನದ ಸದುದ್ದೇಶ ಹಾಗೂ ಗುಣಮಟ್ಟ ಪರಿಶೀಲನೆಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಕಲಬುರಗಿಯಲ್ಲಿ ಹೊಸ ಉಪವಿಭಾಗ ಕಚೇರಿ ಆರಂಭಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದ್ದರು.

ಇಲಾಖೆ ರಾಷ್ಟ್ರೀಯ ಹೆದ್ದಾರಿ ವಿಭಾಗದಡಿ ಚಿತ್ರದುರ್ಗ, ಹುಬ್ಬಳ್ಳಿ ಹಾಗೂ ಬೆಂಗಳೂರಲ್ಲಿ ಗುಣನಿಯಂತ್ರಣ ಕಚೇರಿಗಳಿದ್ದು, ನಾಲ್ಕನೆಯದಾಗಿ ಕಲಬುರಗಿಯಲ್ಲಿ ಹೊಸ ಕಚೇರಿ ಆರಂಭಿಸಬೇಕಿತ್ತು. ಆದರೆ, ರಾ.ಹೆ.ಗಳ ಸಿಇ ಪತ್ರ ಆಧರಿಸಿ ಸರ್ಕಾರ ಹೊಸದನ್ನು ಪ್ರಾರಂಭಿಸುವುದರ ಬದಲು ಚಿತ್ರದುರ್ಗ ಕಚೇರಿಯನ್ನು ಶಿಫ್ಟ್ ಮಾಡಿ ಆದೇಶಿಸಿತ್ತು.

ಕಚೇರಿ ಸ್ಥಳಾಂತರ ಬೇಡ ಎಂದು ಹಲವು ಜನಪ್ರತಿನಿಧಿಗಳು, ಸಚಿವರು ನೀಡಿದ್ದ ಸಲಹೆಗೆ ಮನ್ನಣೆ ದೊರೆತಿರಲಿಲ್ಲ. ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಶಾಸಕರಾದ ಕೆ.ಸಿ. ವೀರೇಂದ್ರ ಪಪ್ಪಿ, ಬಿ.ಜಿ. ಗೋವಿಂದಪ್ಪ, ಟಿ. ರಘುಮೂರ್ತಿ, ಡಾ.ಎಂ. ಚಂದ್ರಪ್ಪ ಮತ್ತಿತರ ಜನಪ್ರತಿನಿಧಿಗಳು ಸಚಿವ ಜಾರಕಿಹೊಳಿ ಅವರಿಗೆ ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ಸರ್ಕಾರ ಕಳೆದ ಜೂನ್ 26 ರಂದು ಚಿತ್ರದುರ್ಗದ ಕಚೇರಿಯನ್ನು ಇಲ್ಲೇ ಉಳಿಸಿ, ಕಲಬುರಗಿಯಲ್ಲಿ ಹೊಸ ಕಚೇರಿ ಪ್ರಾರಂಭಕ್ಕೆ ಆದೇಶಿಸಿದೆ. ಅಲ್ಲಿ ಎಇಇ, ಎಇ, ಜೆಇ ಮತ್ತಿತರ ಏಳೆಂಟು ಅಧಿಕಾರಿ, ನೌಕರರ ಹುದ್ದೆಗಳನ್ನು ಮರು ಹೊಂದಾಣಿಕೆ ಮೂಲಕ ಭರ್ತಿ ಮಾಡಲು ಸೂಚಿಸಿದೆ. ಇತ್ತೀಚೆಗೆ ಕಲಬುರಗಿಯಲ್ಲಿ ಹೊಸ ಕಚೇರಿ ಕಾರ್ಯಾರಂಭಕ್ಕೆ ಚಾಲನೆ ಸಿಕ್ಕಿದೆ.

ಸರ್ಕಾರದ ನಿರ್ಧಾರದಿಂದ ಚಿತ್ರದುರ್ಗ ಕಚೇರಿ ವ್ಯಾಪ್ತಿಯ ಜಿಲ್ಲೆಗಳಲ್ಲೂ ರಾ.ಹೆ. ಕಾಮಗಾರಿಗಳ ಗುಣನಿಯಂತ್ರಣ ಪರಿವೀಕ್ಷಣೆ ಕಾರ್ಯ ಪರಿಣಾಮಕಾರಿ ಅನುಷ್ಠಾನಕ್ಕೆ ಅನುಕೂಲವಾಗಲಿದೆ ಎಂದು ಅಧಿಕಾರಿಯೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net