

ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ
ಚಿತ್ರದುರ್ಗ ಲೋಕಸಭಾ ಎಸ್‌ಸಿ ಮೀಸಲು ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಗೋವಿಂದ ಎಂ.ಕಾರಜೋಳ ಅವರು ಗೆಲುವಿನ ನಗೆ ಬೀರಿದ್ದಾರೆ. ಬಿಜೆಪಿ ಟಿಕೆಟ್ ಘೋಷಣೆಯಲ್ಲಿ ತಡವಾದರೂ ಗೆಲುವಿನ ಸಿಹಿ, ಕಾರಜೋಳರಿಗೆ ದೊರಕಿದೆ. ಈ ಮೂಲಕ ಬಿಜೆಪಿ ಮರಳಿ ಕ್ಷೇತ್ರ ಉಳಿಸಿಕೊಂಡಿದೆ.
ಆದರೆ, ಈ ಹಿಂದಿನ ಎರಡು ಚುನಾವಣೆಗಳಲ್ಲಿ 2009 ರಲ್ಲಿ ಜನಾರ್ದನಸ್ವಾಮಿ, 2019 ಎ.ನಾರಾಯಣಸ್ವಾಮಿ ಹಾಗೂ ಈಗ ಪಕ್ಷದ ಬೇರೆ ಅಭ್ಯರ್ಥಿಗಳು ಜಯ ಸಾಧಿಸಿದ್ದು ವಿಶೇಷವೆನಿಸಿದೆ. ತುಮಕೂರು ಜಿಲ್ಲೆ ಶಿರಾ, ಪಾವಗಡ ಸೇರಿದಂತೆ ಲೋಕಸಭಾ ಕ್ಷೇತ್ರವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ 7 ಕಾಂಗ್ರೆಸ್ ಶಾಸಕರಿದ್ದ, ಕಾಂಗ್ರೆಸ್ಸಿನ ಭದ್ರಕೋಟೆ ಚಿತ್ರದುರ್ಗ ಕೈ ವಶಪಡಿಸಿಕೊಳ್ಳಲು ಕಾಂಗ್ರೆಸ್ ವಿಫಲವಾಗಿದೆ.
ಎಐಸಿಸಿ ಪ್ರಧಾನ ಕಾರ‌್ಯದರ್ಶಿ ಪ್ರಿಯಾಂಕಗಾಂಧಿ ಕಾಲಿಟ್ಟ ಕಡೆ ಜಯ ಖಚಿತ ಎಂದು ನಂಬಿದ್ದ ಕೈ ಕಾರ‌್ಯಕರ್ತರಿಗೆ ಈ ಫಲಿತಾಂಶ ಅಘಾತವನ್ನುಂಟು ಮಾಡಿದೆ. ದೂರದ ಊರಿನವರೆಂಬ ಮಾತಿಗೂ ಮತದಾರ ಮನ್ನಣೆ ನೀಡಿಲ್ಲ.
ಕಾರಜೋಳ ಅವರು 6,84,890 ಮತ ಪಡೆಯುವ ಮೂಲಕ, ಸಮೀಪದ ಪ್ರತಿ ಸ್ಪರ್ಧಿ 6,36,769 ಮತಗಳನ್ನು ಪಡೆದ ಕಾಂಗ್ರೆಸ್ಸಿನ ಬಿ.ಎನ್.ಚಂದ್ರಪ್ಪ ಅವರನ್ನು 48,121ಮತಗಳ ಅಂತರದಲ್ಲಿ ಪರಾಜಿತಗೊಳಿಸಿದ್ದಾರೆ. ಬಿಜೆಪಿ ಕೊನೆಗಳಿಗೆಯಲ್ಲಿ ಅವರಿಗೆ ಟಿಕೆಟ್ ಘೋಷಿಸಿದ್ದರೂ ಅನುಭವ, ರಾಜಕೀಯ ಚಾಣಾಕ್ಷತನ ಮೆರೆಯುವಲ್ಲಿ ಕಾರಜೋಳ ಯಶಸ್ವಿಯಾಗಿದ್ದಾರೆ. ಮಾದಿಗ ಎಡಗೈ ಸಮುದಾಯದವರಿಗೆ ಟಿಕೆಟ್ ಕೊಟ್ಟರೆ ಅನುಕೂಲ ಎಂಬ ಪಕ್ಷದ ತಂತ್ರಗಾರಿಕೆ ಹಾಗೂ ಜೆಡಿಎಸ್-ಬಿಜೆಪಿ ಮೈತ್ರಿ ಫಲಿಸಿದೆ.
ಮಧ್ಯ ಕರ್ನಾಟಕದ ಮಾಜಿ ಡಿಸಿಎಂ ಕಾರಜೋಳ ಚಿತ್ರದುರ್ಗದಿಂದ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದ್ದಾರೆ. ಕಾರಜೋಳ ಗೆದ್ದರೆ ಕೇಂದ್ರದಲ್ಲಿ ಮಂತ್ರಿ ಆಗುತ್ತಾರೆಂದು ಪ್ರಚಾರ ಮಾಡಲಾಗಿದ್ದು, ದುರ್ಗಕ್ಕೆ 2ನೇ ಬಾರಿಗೆ ಅವಕಾಶ ಒದಗಿ ಬಂದರೆ ಅಚ್ಚರಿ ಪಡಬೇಕಿಲ್ಲ.
ಕಣದಲ್ಲಿ ಬಿಎಸ್‌ಪಿ ಮತ್ತಿತರ ಪಕ್ಷಗಳು ಹಾಗೂ ಪಕ್ಷೇತರರ ಸಹಿತ ಕಣದಲ್ಲಿ 20 ಅಭ್ಯರ್ಥಿಗಳಿದ್ದರು. ಎಣಿಕೆ ಆರಂಭದ ಮೊದಲ ಸುತ್ತಿನಲ್ಲಿ 75 ಮತಗಳ ಅಂತರದಲ್ಲಿ ಮುನ್ನಡೆ ಕಾಯ್ದುಗೊಂಡಿದ್ದ ಚಂದ್ರಪ್ಪ ನಂತರದ ಎಲ್ಲ ಸುತ್ತುಗಳಲ್ಲೂ ಹಿನ್ನಡೆ ಅನುಭವಿಸಿದರು. ಒಂದು ಹಂತದಲ್ಲಿ 42 ಸಾವಿರಕ್ಕೂ ಅಧಿಕ ಮುನ್ನಡೆ ಕಂಡಿದ್ದ ಕಾರಜೋಳ ಹಾಗೂ ಚಂದ್ರಪ್ಪ ಅವರ ನಡುವೆ ಮತಗಳ ಅಂತರದಲ್ಲಿ ಏರಿಳಿತ ಕಂಡು ಬಂದರೂ ಕಾರಜೋಳರ ಮುನ್ನಡೆಗೆ ಧಕ್ಕೆ ಆಗಲಿಲ್ಲ.
ಕಡಿಮೆ ಅವಧಿಯಲ್ಲಿ ಕ್ಷೇತ್ರ ಪರಿಚಯಿಸಿಕೊಳ್ಳಬೇಕಾದ ಸವಾಲಿದ್ದರೂ ಶಿಸ್ತಿನ ಸಿಪಾಯಿಯಾಗಿ ಹೈಕಮಾಂಡ್ ಆಣತಿಯಂತೆ ಅಖಾಡಕ್ಕೆ ಧುಮುಕಿದ್ದ ಕಾರಜೋಳರಿಗೆ ಭರ್ಜರಿ ಉಡುಗೊರೆ ದೊರಕಿದೆ. ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ, ಮೊಳಕಾಲ್ಮೂರು, ಚಳ್ಳಕೆರೆ ಕಾಂಗ್ರೆಸ್ಸಿಗೆ ಲೀಡ್ ಕೊಟ್ಟಿದ್ದರೆ, ಉಳಿದ ಆರರಲ್ಲಿ ‘ಕೈ’ಗೆ ಹಿನ್ನಡೆಯಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಕ್ಷೇತ್ರ ಹಿರಿಯೂರಲ್ಲೂ ಕಾಂಗ್ರೆಸ್‌ಗೆ ಲೀಡ್ ಕಡಿಮೆ ಆಗಿದೆ.
ಮತ ಎಣಿಕೆ ಆರಂಭವಾಗುತ್ತಿದ್ದಂತೆ ಪುತ್ರ ಉತ್ಸವ್‌ನೊಂದಿಗೆ ಆಗಮಿಸಿದ್ದ ಚಂದ್ರಪ್ಪ ಅವರು, ಗೆಲುವಿನ ಭರವಸೆಯಲ್ಲಿದ್ದರು. ಆದರೆ, ಮುನ್ನಡೆ ಕಾರಜೋಳರ ಪಾಲಾಗುತ್ತಿದ್ದಂತೆ ಅವರು ಎಣಿಕೆ ಕೇಂದ್ರದಿಂದ ನಿರ್ಗಮಿಸಿದರು. ಮತ ಎಣಿಕೆ ಮುನ್ನ ದಿನ 70 ಸಾವಿರ ಅಂತರದೊಂದಿಗೆ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದ ಕಾರಜೋಳ ಅವರ ಅಂತಿಮವಾಗಿ ಜಯ ಸಾಧಿಸಿದ್ದಾರೆ.
ಯಾವ ವಿಧಾನಸಭಾ ಕ್ಷೇತ್ರದಲ್ಲಿ ಯಾವ ಪಕ್ಷಕ್ಕೆ ಎಷ್ಟು ಮತ ?
ಕ್ಷೇತ್ರ-ಬಿಜೆಪಿ-ಕಾಂಗ್ರೆಸ್-ಅಂತರ
ಮೊಳಕಾಲ್ಮೂರು-78137-104262-26125
ಚಳ್ಳಕೆರೆ-76974-80499-3525
ಚಿತ್ರದುರ್ಗ-101430-83547-17883
ಹಿರಿಯೂರು-88794-82597-6197
ಹೊಸದುರ್ಗ-76252-66565-9687
ಹೊಳಲ್ಕೆರೆ-95991-78210-17781
ಶಿರಾ-89847-77353-12494
ಪಾವಗಡ-73792-61119-12673
*ನೋಟಾ ಮೇಲುಗೈ
ಕಣದಲ್ಲಿದ್ದ 20 ಅಭ್ಯರ್ಥಿಗಳ ಪೈಕಿ ಇಬ್ಬರು ಮಾತ್ರ ಲಕ್ಷದ ಗಟಿ ದಾಟಿದ್ದಾರೆ. ಉಳಿದಂತೆ ಬಿಎಸ್‌ಪಿಯ ಅಶೋಕ ಚಕ್ರವರ್ತಿ 7 ಸಾವಿರ ಮತಗಳಿಸಿದ್ದಾರೆ. 14 ಅಭ್ಯರ್ಥಿಗಳು ಸಾವಿರ ಮತ ಪಡೆದಿದ್ದರೇ ಮೂವರು ಸ್ಪರ್ಧಿಗಳು ಸಾವಿರವನ್ನು ಮುಟ್ಟಿಲ್ಲ. 14 ಅಭ್ಯರ್ಥಿಗಳಿಗಿಂತ ನೋಟಾ (3190) ಮೇಲುಗೈ ಸಾಧಿಸಿದೆ.