ದುರ್ಗದಲ್ಲಿ ಬುಡಕಟ್ಟು ಸಂಸ್ಕೃತಿ ವೈಭವ

CTD 23 MINCHERE ETTINGADIGALUU -10 (2)--01
Published on

ಚಿತ್ರದುರ್ಗ: ಬುಡಕಟ್ಟು ಸಮುದಾಯದ ಸತ್ಯಸಂತ, ದಾಸರ ದಂಡಿನ ಒಡೆಯ ಗಾದ್ರಿಪಾಲನಾಯಕ ಸ್ವಾಮಿಯ ಸಾಲು, ಸಾಲು ಎತ್ತಿನಗಾಡಿಗಳ ಮಿಂಚೇರಿ ಮಹೋತ್ಸವ ಶನಿವಾರ ಚಿತ್ರದುರ್ಗ ತಾಲೂಕು ಬಚ್ಚಬೋರನಹಟ್ಟಿಯಿಂದ ಆರಂಭವಾಯಿತು.
ಬುಡಕಟ್ಟು ಸಂಸ್ಕೃತಿಯ ನಾಯಕ, ಮ್ಯಾಸ ನಾಯಕ ಸಮುದಾಯದ ಆರಾಧ್ಯಧೈವ ಗಾದ್ರಿಪಾಲನಾಯಕ ಸ್ವಾಮಿ ಯಾತ್ರೆ ಗೋನೂರು, ಚಿತ್ರದುರ್ಗ, ಸೀಬಾರ, ಗೂಳಯ್ಯನಹಟ್ಟಿ, ಕ್ಯಾಸಾಪುರ, ಕಡ್ಲೇಗುದ್ದು, ಸಿರಿಗೆರೆ, ಡಿ.ಮದಕರಿಪುರದ ಮೂಲಕ ಮಿಂಚೇರಿಪುರದವರೆಗೆ ಸಾಗಲಿದೆ.
ಬಚ್ಚಬೋರನಹಟ್ಟಿಯಲ್ಲಿ ಮುಂಜಾನೆ ದೇವರ ಮುತ್ತಯ್ಯಗಳ ಸಮ್ಮುಖ, ದೇವರ ಮಜ್ಜನಬಾವಿಯಲ್ಲಿ ಗಂಗಾಪೂಜೆ, ಊರದೇವರ ಪೂಜೆ ನೆರವೇರಿದ ಬಳಿಕ ಬೆಳಗ್ಗೆ 11.30ಕ್ಕೆ ಯಾತ್ರೆ ಪ್ರಾರಂಭವಾಯಿತು. ದೇವರ ಎತ್ತುಗಳು, ನೂರಾರು ಜೋಡತ್ತಿನ ಅಲಂಕೃತ ಗಾಡಿಗಳು, ನೂರಾರು ವಾಹನಗಳಿದ್ದ ಯಾತ್ರೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
ವಿಶೇಷವಾಗಿ ಸಿಂಗರಿಸಿದ್ದ ಎತ್ತುಗಳೊಂದಿಗೆ, ತಾಡಪಾಲು ಹೊದಿಕೆ, ಅಗತ್ಯ ಮೇವಿನೊಂದಿಗೆ ಹೊರಟ್ಟಿದ್ದ ಯಾತ್ರೆಗೆ ಹೊರಟ್ಟಿದ್ದ ಭಕ್ತರಿ ದ್ದ ಎತ್ತಿನಬಂಡಿಗಳ ಸಾಲು ಕಣ್ಣು ಹಾಯಿಸಿದಷ್ಟೂ ದೂರದವರೆಗೆ ಕಾಣುತ್ತಿತ್ತು. ಗಾದ್ರಿಪಾಲನಾಯಕ ಸ್ವಾಮಿಯ ಭಾವಚಿತ್ರ, ಮದಕರಿ ನಾಯಕ, ಮಹರ್ಷಿ ವಾಲ್ಮೀಕಿ ಭಾವಚಿತ್ರಗಳಿದ್ದ ಎತ್ತಿನಗಾಡಿಗಳ ಮೆರವಣಿಗೆಯನ್ನು ಸಾವಿರಾರು ಜನ ಕಣ್ತುಂಬಿಕೊಂಡರು.
ಗ್ರಾಮದಿಂದ ಹೊರಟ ಯಾತ್ರೆಯನ್ನು ಕಕ್ಕಲು ಬೆಂಚಲ್ಲಿ ಪೂಜೆಯ ಬಳಿಕ ನಗರದ ತುರುವನೂರು ರಸ್ತೆ ಶ್ರೀ ವೆಂಕಟರಮಣಸ್ವಾಮಿ ದೇವಾಲಯದ ಬಳಿ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹಾಗೂ ಗಣ್ಯರು ಪುಷ್ಪಾರ್ಚನೆ ಮೂಲಕ ಸ್ವಾಗತಿಸಿದರು.
ಸಂಜೆ ಕ್ಯಾಸಾಪುರದ ಬಯಲಿನಲ್ಲಿ ಸ್ವಾಮಿಗೆ ಪೂಜೆ ಸಲ್ಲಿಸಿದ ನಂತರ ಯಾತ್ರೆ ಬೀಡು ಬಿಟ್ಟಿತು. ರಾತ್ರಿ ಭಜನೆ, ಸಾಂಸ್ಕೃತಿಕ ಕಾರ್ಯ ಕ್ರಮಗಳು ನಡೆದವು. ಭಾನುವಾರ ಬೆಳಗ್ಗೆ 7ಕ್ಕೆ ಸ್ವಾಮಿ ಪೂಜೆ ಬಳಿಕ ಮುಂದುವರಿಯಲಿರುವ ಯಾತ್ರೆ ಮಧ್ಯಾಹ್ನ ಸಿರಿಗೆರೆ, ಡಿ.ಮದಕರಿಪುರಕ್ಕೆ ತಲುಪಿ, ಅಲ್ಲಿನ ವರತಿನಾಯಕನಕೆರೆ ದಂಡೆಯಲ್ಲಿ ವಿರಮಿಸಲಿದೆ. ನಂತರ ಕೆರೆ ದಂಡೆಯಲ್ಲಿ ಪೂಜೆ ಬಳಿಕ ಗಾದ್ರಿಪಾಲನಾಯಕ ಸ್ವಾಮಿ ಸುಕ್ಷೇತ್ರ ಮಿಂಚೇರಿಗೆ ತೆರಳಲಿದೆ.
ಸಂಜೆ 5 ಸ್ವಾಮಿಯ ಮೀಸಲು ಹಾಲಿನ ಕಂಬಿಯ ಪೂಜೆ. ರಾತ್ರಿ ಗುರು-ಹಿರಿಯರ ಸಾಂಪ್ರದಾಯಿಕ ಪೂಜೆ ನೆರವೇರಲಿದೆ. ಮಧ್ಯರಾತ್ರಿ ಕಂಚವ್ವ ಕಾಮವ್ವರ ಚಿಲುಮೆ ಗಂಗಮ್ಮನ ಮಹಾಪೂಜೆ ನಡೆಯಲಿದೆ. ಗಾದ್ರಿಪಾಲನಾಯಕನ ನೆಲವೀಡಾಗಿರುವ ಮಿಂಚೇರಿಬೆಟ್ಟಕ್ಕೆ ವಿವಿಧೆಡೆಗಳಿಂದ ಸಾವಿರಾರು ಭಕ್ತರು ಬಂದು ಪೂಜೆ ಸಲ್ಲಿಸುತ್ತಾರೆ. ಸಮೃದ್ಧ ಮಳೆ-ಬೆಳೆಗಾಗಿ ಪ್ರಾರ್ಥಿಸಲಾಗುತ್ತದೆ.
ಜಿಪಂ ಕೆಡಿಪಿ ಸದಸ್ಯ ಕೆ.ಸಿ.ನಾಗರಾಜ್, ನಾಯಕ ಸಮಾಜದ ಜಿಲ್ಲಾಧ್ಯಕ್ಷ ಎಚ್.ಜೆ.ಕೃಷ್ಣಮೂತಿ, ತಾಲೂಕಾಧ್ಯಕ್ಷ ಬಿ.ಕಾಂತರಾಜ್, ನಗರಸಭೆ ಮಾಜಿ ಅಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ, ಸದಸ್ಯ ದೀಪಕ್, ಮುಖಂಡರಾದ ಅಂಜಿನಪ್ಪ, ಗೋಪಾಲಸ್ವಾಮಿನಾಯಕ, ಪಾಲಯ್ಯ, ಕಾಟೀಹಳ್ಳಿ ಕರಿಯಣ್ಣ, ಮೂರ್ತಿ, ಬೋರಯ್ಯ, ಪ್ರಹ್ಲಾದ್, ಪಾಪಣ್ಣ, ಮಂಜುನಾಥ್ ಮತ್ತಿತರರು ಇದ್ದರು.

*ಕೋಟ್
ನಾಯಕ ಗಾದ್ರಿಪಾಲನಾಯಕನ ಸ್ಮರಣಾರ್ಥ ಐದು ವರ್ಷಗಳಿಗೊಮ್ಮೆ ಮಿಂಚೇರಿ ಮಹೋತ್ಸವವನ್ನು ಬುಡಕಟ್ಟು ಸಮುದಾಯ ಆಚರಿಸಿಕೊಂಡು ಬರುತ್ತಿದೆ. ವಿಶೇಷವಾಗಿ ಮಧ್ಯಕರ್ನಾಟಕದ ಸಾಂಸ್ಕೃತಿಕ ಹಬ್ಬವನ್ನಾಗಿ ಆಚರಿಸುತ್ತಿರುವುದು ವಿಶೇಷ.
ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ

*ಕೋಟ್
ಸ್ವಾತಂತ್ರೃ ಪೂರ್ವದಿಂದಲೂ ಈ ಉತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಇದು ಬುಡಕಟ್ಟು ಸಂಸ್ಕೃತಿ ಬಿಂಬಿಸುವ ಹಾಗೂ ಗಾದ್ರಿಪಾಲಕನನ್ನು ಸ್ಮರಿಸುವ ಹಬ್ಬ.
ಎಚ್.ಜೆ.ಕೃಷ್ಣಮೂರ್ತಿ, ಜಿಲ್ಲಾಧ್ಯಕ್ಷ, ನಾಯಕ ಸಮಾಜ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net