

ಚಿತ್ರದುರ್ಗ: ಕೇಂದ್ರದ ಗೃಹ ಸಚಿವ ಅಮಿತ್ ಷಾ ನೀಡಿದ ಭರವಸೆಯಂತೆ ನಗರದಲ್ಲಿ ಥೀಮ್ ಪಾರ್ಕ್ ನಿರ್ಮಿಸಬೇಕು ಎಂದು ನಾಯಕ ಸಮಾಜದ ಜಿಲ್ಲಾಧ್ಯಕ್ಷ ಎಚ್.ಜೆ.ಕೃಷ್ಣಮೂರ್ತಿ ಒತ್ತಾಯಿಸಿದರು.
ನಗರದಲ್ಲಿ ಗುರುವಾರ ಆಯೋಜಿಸಿದ್ದ ರಾಜಾವೀರ ಮದಕರಿನಾಯಕರ 243ನೇ ಪುಣ್ಯಸ್ಮರಣೋತ್ಸವ ಅಂಗವಾಗಿ ಮದಕರಿ ನಾಯಕರ ಪ್ರತಿಮೆಗೆ ಮಾಲಾರ್ಪಣೆ, ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಅಮಿತ್ ಷಾ ಅವರು ಚಿತ್ರದುರ್ಗಕ್ಕೆ ಬಂದಾಗ ಥೀಮ್ ಪಾರ್ಕ್ ನಿರ್ಮಿಸುವುದಾಗಿ ಭರವಸೆ ನೀಡಿದ್ದರು. ಅದು ಈವರೆಗೂ ಈಡೇರಿಲ್ಲ. ತಿಮ್ಮಣ್ಣನಾಯಕನ ಕೆರೆ ಸಮೀಪ ತೋಟಗಾರಿಕೆ ಇಲಾಖೆಗೆ ಸೇರಿದ ಜಾಗದಲ್ಲಿ ಥೀಮ್ ಪಾರ್ಕ್ ನಿರ್ಮಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಕೇಂದ್ರ ಸರ್ಕಾರವನ್ನು ಎಚ್ಚರಿಸಿದರು.
ರಾಜಾ ಮದಕರಿನಾಯಕ ಮಾತನಾಡಿ, ಶ್ರೀರಂಗಪಟ್ಟಣದ ಪಶ್ವಿಮ ವಾಹಿನಿ ತೀರದಲ್ಲಿ ರಾಜಾವೀರ ಮದಕರಿನಾಯಕರ ದೇಹ ದಹನವಾಯಿತು. ಹಾಗಾಗಿ ಅಲ್ಲಿ ಸ್ಮಾರಕವಾಗಬೇಕು. ದಕ್ಷಿಣ ಭಾರತದಲ್ಲಿಯೆ ಅತ್ಯಂತ ಪ್ರಮುಖ ಐತಿಹಾಸಿಕ ಸ್ಥಳವಾಗಿರುವ ಚಿತ್ರದುರ್ಗದಲ್ಲಿ ಥೀಮ್ ಪಾರ್ಕ್ ನಿರ್ಮಿಸುವುದಾಗಿ ಗೃಹ ಸಚಿವ ಅಮಿತ್ ಷಾ ಹೇಳಿದ್ದರು. ಅದು ಇನ್ನೂ ಆಗಿಲ್ಲ. ಕೇಂದ್ರ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.
ಬಾಲೇನಹಳ್ಳಿ ತಿಪ್ಪೇಸ್ವಾಮಿ, ನಗರಸಭೆ ಸದಸ್ಯ ವೆಂಕಟೇಶ್, ಮಾಜಿ ಸದಸ್ಯ ತಿಪ್ಪೇಸ್ವಾಮಿ, ಜಿಲ್ಲಾ ಕಾಂಗ್ರೆಸ್ ಎಸ್ಟಿ ಸೆಲ್ ವಿಭಾಗದ ಅಧ್ಯಕ್ಷ ಮಂಜುನಾಥ್, ರತ್ನಮ್ಮ ಎಚ್.ಅಂಜಿನಪ್ಪ, ಪ್ರಶಾಂತ್ ಕೂಲಿಕಾರ್, ವಕೀಲ ಅಶೋಕ್ ಬೆಳಗಟ್ಟ, ಓಬಳೇಶ್ ಮುದ್ದಾಪುರ ಹೊಸಹಟ್ಟಿ ಇತರರಿದ್ದರು.