

ಡಿಪಿಎನ್ ಶ್ರೇಷ್ಠಿ, ಚಿತ್ರದುರ್ಗ
ನಗರದಲ್ಲಿ ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರ ಸ್ಥಾಪನೆ ಕನಸು ನನಸಾಗುವ ಕಾಲ ಸನ್ನಿಹಿತವಾಗಿದ್ದು, ಜಿಲ್ಲಾಡಳಿತ ಕೇಂದ್ರವನ್ನು ಸ್ಥಾಪಿಸುವ ಆಶಯದೊಂದಿಗೆ ಮುಂದಡಿ ಇಟ್ಟಿದೆ.
ಈಗಾಗಲೇ ಧಾರವಾಡ, ಮಂಗಳೂರು ಪಿಲಿಕುಳದಲ್ಲಿ ಪ್ರಾದೇಶಿಕ ವಿಜ್ಞಾನ ಕೇಂದ್ರಗಳು, ಹಾವೇರಿ, ದಾವಣಗೆರೆ, ಚಿಕ್ಕಬಳ್ಳಾಪುರ ಮತ್ತಿತರೆಡೆ ಉಪ ಪ್ರಾದೇಶಿಕ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.
ಕೇಂದ್ರ ಸಂಸ್ಕೃತಿ ಸಚಿವಾಲಯದಿಂದ ಚಿತ್ರದುರ್ಗದಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಸ್ಥಾಪಿಸುವಂತೆ ಸಂಸದ ಗೋವಿಂದ ಎಂ. ಕಾರಜೋಳ ಅವರು ಕೇಂದ್ರ ಸಚಿವ ಗಜೇಂದ್ರಸಿಂಗ್ ಶೆಖಾವತ್ ಅವರಿಗೆ ಕಳೆದ ಡಿಸೆಂಬರ್‌ನಲ್ಲಿ ಮನವಿ ಮಾಡಿದ್ದರು.
ಕೇಂದ್ರ ಸ್ಥಾಪನೆಗೆ ಜಿಲ್ಲಾಡಳಿತ ಜಾಗ ಗುರುತಿಸುವ ಕಾರ್ಯದಲ್ಲಿ ನಿರತವಾಗಿದೆ. ಇಂಗಳದಾಳ್ ಸಮೀಪ ನಿರ್ಮಾಣವಾಗುತ್ತಿರುವ ಜಿಲ್ಲಾಡಳಿತ ಕಚೇರಿಯ ಹೊಸ ಕಟ್ಟಡದ ಬಳಿ ಐದು ಎಕರೆ ಜಾಗ ಗುರುತಿಸುವ ಸಾಧ್ಯತೆ ಇದೆ.
ಎಲ್ಲಿ ಸ್ಥಾಪಿಸಬೇಕು? ಸೂಕ್ತ ಸ್ಥಳ ಯಾವುದೆಂಬ ವಿಚಾರ ಸದ್ಯದಲ್ಲೇ ಅಂತಿಮವಾಗಲಿದೆ. ಬಹುತೇಕ ಮುಂದಿನ ವಾರದೊಳಗೆ ಜಾಗ ಗುರುತಿಸಿ, ಪ್ರಸ್ತಾವನೆ ಸಲ್ಲಿಕೆ ಕಾರ್ಯ ಪೂರ್ಣಗೊಳ್ಳಲಿದೆ. ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ(ಕೆಎಂಇಆರ್‌ಸಿ)ದಿಂದ 15 ಕೋಟಿ ರೂ. ಅನುದಾನವನ್ನು ಇದಕ್ಕಾಗಿ ಕೇಂದ್ರದ ನಿರ್ಮಾಣಕ್ಕೆ ಕಾಯ್ದಿರಿಸಲಾಗಿದೆ.
ವಿಜ್ಞಾನ, ತಂತ್ರಜ್ಞಾನದ ಆವಿಷ್ಕಾರಗಳನ್ನು ಜನಸಾಮಾನ್ಯರಿಗೆ ಪರಿಚಯಿಸುವ, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ, ವೈಚಾರಿಕ ಚಿಂತನೆಗಳನ್ನು ಬೆಳೆಸಲು ಈ ಕೇಂದ್ರಗಳು ಸಹಕಾರಿಯಾಗಿವೆ.
ಬಾಕ್ಸ್.
ಇಂದು ಪ್ರತಿಜ್ಞಾ ವಿಧಿ ಸ್ವೀಕಾರ
ಸಮಾಜದಲ್ಲಿ ಶಾಂತಿ, ಸಹೋದರತ್ವ ಸಾರುವ, ವೈಜ್ಞಾನಿಕ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ರಾಷ್ಟ್ರೀಯ ವಿಜ್ಞಾನ ದಿನ ಫೆ.28 ರಂದು ಬೆ ಳಗ್ಗೆ 10.30ಕ್ಕೆ ರಾಜ್ಯದ ಎಲ್ಲ ಶಾಲಾ, ಕಾಲೇಜು ಹಾಗೂ ಸರ್ಕಾರಿ ಕಚೇರಿಗಳಲ್ಲಿ ಪ್ರತಿಜ್ಞಾವಿಧಿ ಸ್ವೀಕಾರಕ್ಕೆ ರಾಜ್ಯ ಸರ್ಕಾರ ಆದೇಶಿಸಿದೆ. ವೈಜ್ಞಾನಿಕ ಮತ್ತು ವೈಚಾರಿಕ ಮನೋಭಾವ ಬೆಳೆಸಿಕೊಳ್ಳುವುದು ನಮ್ಮ ಸಂವಿಧಾನದ ಮೂಲಭೂತ ಕರ್ತವ್ಯಗಳಲ್ಲಿ ಒಂದಾಗಿದೆ.
---
ಕೋಟ್
ಚಿತ್ರದುರ್ಗದಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಸ್ಥಾಪನೆಗೆ ಜಾಗ ಗುರುತಿಸುವ ಕಾರ್ಯ ನಡೆದಿದೆ. ಮುಂದಿನ ವಾರದೊಳಗೆ ಅಂ ದಾಜು 5 ಎಕರೆ ಸರ್ಕಾರಿ ಜಾಗ ಗುರುತಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಕೆಎಂಇಆರ್‌ಸಿಯಿಂದ ಕೇಂದ್ರದ ನಿರ್ಮಾಣಕ್ಕೆ 15 ಕೋಟಿ ರೂ. ಅನುದಾನ ಕಾಯ್ದಿರಿಸಲಾಗಿದೆ.
- ಟಿ. ವೆಂಕಟೇಶ್, ಜಿಲ್ಲಾಧಿಕಾರಿ
---
ಇಂದು ರಾಷ್ಟ್ರೀಯ ವಿಜ್ಞಾನ ದಿನಾಚರಣೆ
ಚಿತ್ರದುರ್ಗ: ಚಿತ್ರದುರ್ಗ ಸೈನ್ಸ್ ಫೌಂಡೇಶನ್ ನಗರದ ಶಿಕ್ಷಕರ ಸರ್ಕಾರಿ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಫೆ.28ರಂದು ಮಧ್ಯಾಹ್ನ 2.30 ಕ್ಕೆ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಂಡಿದೆ. ಸಿಟಿಇ ಪ್ರಾಚಾರ್ಯ ಎನ್.ಜೆ. ಗುರುಪ್ರಸಾದ್ ಅಧ್ಯಕ್ಷತೆ ವಹಿಸುವರು. ಫೌಂಡೇಷನ್ ಅಧ್ಯಕ್ಷ ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ ಉದ್ಘಾಟಿಸುವರು. ಉಪಾಧ್ಯಕ್ಷ ಚಳ್ಳಕೆರೆ ಯರ‌್ರಿಸ್ವಾಮಿ ಉಪನ್ಯಾಸ ನೀಡುವರು. ನಾನಾ ಗಣ್ಯರು ಉಪಸ್ಥಿತರಿರುವರು.
ಚಿತ್ರದುರ್ಗ ವಿಜ್ಞಾನ ಕೇಂದ್ರದಿಂದ ನಗರದ ಪಿವಿಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಫೆ.28ರಂದು ಬೆಳಗ್ಗೆ 11ಕ್ಕೆ ರಾಷ್ಟ್ರೀಯ ವಿಜ್ಞಾನ ದಿನ ಆಚರಿಸಲಾಗುತ್ತಿದೆ. ವಿದ್ಯಾಲಯದ ಪ್ರಾಚಾರ‌್ಯೆ ಆರ್. ಉಷಾ ಅಧ್ಯಕ್ಷತೆ ವಹಿಸುವರು. ವಿಜ್ಞಾನ ಕೇಂದ್ರದ ಉಪಾಧ್ಯಕ್ಷ ಎಂ.ಆರ್.ದಾಸೇಗೌಡ ಉದ್ಘಾಟಿಸುವರು. ಕಾರ್ಯದರ್ಶಿ ಕೆ. ರಾಜಕುಮಾರ್ ಉಪನ್ಯಾಸ ನೀಡುವರು. ನಾನಾ ಗಣ್ಯರು ಉಪಸ್ಥಿತರಿರುವರು.