

ಚಿತ್ರದುರ್ಗ: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಸೆ.15 ರಂದು ನಿರ್ಮಿಸುವ ಮಾನವ ಸರಪಳಿ ಗಿನ್ನಿಸ್ ದಾಖಲೆಯಾಗಲಿದೆ ಎಂದು ಡಿಸಿ ಟಿ.ವೆಂಕಟೇಶ್ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ರಚನೆಯಾಗಲಿರುವ 145 ಕಿ.ಮೀ. ಉದ್ದದ, ಅಂದಾಜು 1.50 ಲಕ್ಷ ಜನರು ಭಾಗವಹಿಸಲಿರುವ ಮಾನವ ಸರಪಳಿ ರಾಜ್ಯದಲ್ಲೇ ಅತಿ ಉದ್ದನೆಯ ಮಾನವ ಸರಪಳಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯಾದ್ಯಂತ ಅಂದು ಮಾನವ ಸರಪಳಿಯೊಂದಿಗೆ ಸಸಿ ನೆಡಲಾಗುವುದು. ಬೀದರ್‌ನಿಂದ ಚಾಮರಾಜನಗರದವರೆಗೆ ಎಲ್ಲ ಜಿಲ್ಲೆಗಳನ್ನು ಸಂಪರ್ಕಿಸುವ ಮಾನವ ಸರಪಳಿಯಲ್ಲಿ ಅಂದಾಜು 25 ಲಕ್ಷ ಜನರು ಪಾಲ್ಗೊಳ್ಳಲಿದ್ದಾರೆ ಎಂದರು.
ಸಂವಿಧಾನದ ಸಮಾನತೆ, ಸ್ವಾತಂತ್ರ್ಯ ಮತ್ತು ಭಾತೃತ್ವದ ಆದರ್ಶಗಳನ್ನು ಒಳಗೊಂಡಿರುವ ಪ್ರಜಾಪ್ರಭುತ್ವದ ಮೌಲ್ಯಗಳೆಡೆ ಜಾಗೃತಿ ಹಾಗೂ ಗೌರವಿಸಲು ಈ ಕಾರ‌್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಮೊಳಕಾಲ್ಮೂರಿನ ಮೇಲಿನ ಕಣಿವೆಯಿಂದ ಹಿರಿಯೂರಿನ ಜವಗೊಂಡನಹಳ್ಳಿವರೆಗೆ ರಾ.ಹೆ.ಯಲ್ಲಿ ಮಾನವ ಸರಪಳಿ ನಿರ್ಮಾಣವಾಗಲಿದೆ ಎಂದು ಮಾಹಿತಿ ನೀಡಿದರು.
ಮೊಳಕಾಲ್ಮೂರು ತಾಲೂಕಲ್ಲಿ ಅಂದಾಜು 55, ಚಳ್ಳಕೆರೆ 47, ಹಿರಿಯೂರು ತಾಲೂಕಲ್ಲಿ 43 ಕಿ.ಮೀ. ಮಾನವ ಸರಪಳಿ ರಚನೆಯಾಗಲಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ 170 ಕಿ.ಮೀ. ಉದ್ದದ ಮಾರ್ಗವಿದ್ದರೂ, ದಟ್ಟಾರಣ್ಯದ ಕಾರಣಕ್ಕೆ ಚಿತ್ರದುರ್ಗ ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತಿ ಉದ್ದನೆ ಮಾನವ ಸರಪಳಿ ನಿರ್ಮಾಣವಾಗಲಿದೆ. ಚಿತ್ರದುರ್ಗ, ಹೊಳಲ್ಕೆರೆ ಹಾಗೂ ಹೊಸದುರ್ಗ ತಾಲೂಕುಗಳ ಜನರೂ ಈ ಕಾರ‌್ಯಕ್ರಮಕ್ಕೆ ಕೈ ಜೋಡಿಸಲಿದ್ದಾರೆ ಎಂದರು.
ಪ್ರತಿ ಕಿ.ಮೀಗೆ ಅಂದಾಜು 850 ಜನರು ಇರಲಿದ್ದಾರೆ. 35 ಸಾವಿರ ಪ್ರೌಢಶಾಲೆ, 13 ಸಾವಿರ ಕಾಲೇಜು ವಿದ್ಯಾರ್ಥಿಗಳು, 13 ಸಾವಿರ ಸ್ವ- ಸಹಾಯ ಸಂಘಗಳು, 35 ಸಾವಿರ ಧರ್ಮಸ್ಥಳ ಸ್ವ-ಸಹಾಯ ಸಂಘಗಳ ಸದಸ್ಯರು, 800 ಆಶಾ ಕಾರ್ಯಕರ್ತರು, 1200 ಅಂಗನವಾಡಿ ಕಾರ‌್ಯಕರ್ತರು, 8 ಸಾವಿರ ಬೋಧಕ, ಬೋಧಕೇತರ ಸಿಬ್ಬಂದಿ, ಮಾರ್ಗದ ಅಕ್ಕಪಕ್ಕದ ಗ್ರಾಪಂಗಳಿಂದ 25 ಸಾವಿರ, ನಗರ ಸ್ಥಳೀಯ ಸಂಸ್ಥೆಗಳಿಂದ 15 ಸಾವಿರ ಅಧಿಕ ಜನರು ಹಾಗೂ ರೈತ, ದಲಿತ ಸಂಘಟನೆಗಳು ಸೇರಿ ನಾನಾ ಸಂಘ-ಸಂಸ್ಥೆಗಳ ಸದಸ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಪ್ರತಿ 100 ಮೀಟರ್‌ಗೆ ಒಬ್ಬರಂತೆ 1400 ಸಿಬ್ಬಂದಿ, ಪ್ರತಿ ಕಿ.ಮೀಟರ್‌ಗೆ ಒಬ್ಬರಂತೆ 145 ತಾಲೂಕು ಅಧಿಕಾರಿಗಳು, ಪ್ರತಿ 5 ಕಿ.ಮೀ.ಗೆ ಒಬ್ಬರಂತೆ ಜಿಲ್ಲಾಮಟ್ಟದ 28 ಅಧಿಕಾರಿಗಳು, ಪ್ರತಿ 20ರಿಂದ 25 ಕಿ. ಮೀ.ಗೆ ಜಿಲ್ಲಾಮಟ್ಟದ ಹಿರಿಯ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಖಾಸಗಿ ಶಾಲಾ-ಕಾಲೇಜುಗಳ 400 ಹಾಗೂ ಖಾಸಗಿ ಬಸ್ ಮಾಲೀಕರು 20 ಬಸ್‌ಗಳನ್ನು ಒದಗಿಸಲಿದ್ದಾರೆ. ಕುಡಿವ ನೀರು, ಆಂಬುಲೆನ್ಸ್, ಅಗ್ನಿಶಾಮಕ ವಾಹನಗಳು ಹಾಗೂ ಪೊಲೀಸ್ ಬಂದೋಬಸ್ತ್ ಇರಲಿದೆ ಎಂದು ಹೇಳಿದರು.
ಎಡಿಸಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ಅಂದು ಬೆಳಗ್ಗೆ ಹಿರಿಯೂರಿನ ಅಂಬೇಡ್ಕರ್ ವೃತ್ತದಲ್ಲಿ ವೇದಿಕೆ ಕಾರ‌್ಯಕ್ರಮ ಏರ್ಪಡಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಸೇರಿ ಅನೇಕ ಜನಪ್ರತಿನಿಧಿಗಳು, ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು.
ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ ಇದ್ದರು.
ಇ-ಸರ್ಟಿಫಿಕೇಟ್
ಅಂದು ಬೆಳಗ್ಗೆ 9.30ರಿಂದ ಮಾನವ ಸರಪಳಿ ರಚನೆಯಾಗಲಿದೆ. ನಾಡಗೀತೆ, ಮುಖ್ಯಅತಿಥಿಗಳ ಭಾಷಣ, ಸಂವಿಧಾನ ಪ್ರಸ್ತಾವನೆ ವಾಚನ ಬಳಿಕ 10 ಗಂಟೆಗೆ ಜೈ ಹಿಂದ್, ಜೈ ಕರ್ನಾಟಕ ಘೋಷಣೆಯೊಂದಿಗೆ ಮಾನವ ಸರಪಳಿ ಕಾರ‌್ಯಕ್ರಮ ಮುಕ್ತಾಯವಾಗಲಿದೆ. ಕ್ಯೂಆರ್ ಕೋಡ್ ಮೂಲಕ ಹೆಸರು ನೋಂದಾಯಿಸಿದವರಿಗೆ ಇ-ಸರ್ಟಿಫೀಕೇಟ್ ಸಿಗಲಿದೆ. ಮಾನವ ಸರಪಳಿಯ ಗೂಗಲ್ ಇಮೇಜ್ ಪಡೆಯಲಾಗುತ್ತದೆ ಎಂದು ಡಿಸಿ ಹೇಳಿದರು.
ಸಂಚಾರ ನಿರ್ಬಂಧ
ಕಾರ‌್ಯಕ್ರಮದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೆಲವೆಡೆ ಸೆ.15 ರಂದು ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಮೊಳಕಾಲ್ಮೂರಿನ ತಮ್ಮೇನಹಳ್ಳಿ ಗೇಟ್‌ನಿಂದ ಹಿರಿಯೂರು ಟಿಬಿ ಸರ್ಕಲ್‌ವರೆಗಿನ ರಾ.ಹೆ 150 (ಎ) ಹಾಗೂ ಹಿರಿಯೂರು ಟಿಬಿ ಸರ್ಕಲ್‌ನಿಂದ ಜೆ.ಜೆ.ಹಳ್ಳಿ ಗಡಿಭಾಗದವರೆಗಿನ ರಾ.ಹೆ. 48ರ ಎಡಭಾಗದಲ್ಲಿ ಸೆ.15ರ ಬೆಳಗ್ಗೆ 7 ರಿಂದ ಮಧ್ಯಾಹ್ನ 12 ಗಂಟೆವರೆಗೆ ಎಲ್ಲ ಬಗೆಯ ವಾಹನಗಳ ಸಂಚಾರ ನಿಷೇಧಿಸಲಾಗಿದೆ ಎಂದು ಎಸ್‌ಪಿ ರಂಜಿತ್‌ಕುಮಾರ್ ಬಂಡಾರು ತಿಳಿಸಿದ್ದಾರೆ.