

ಚಿತ್ರದುರ್ಗ: ಬರಪೀಡಿತ ಚಿತ್ರದುರ್ಗದ ನೀರಿನ ಬವಣೆ ಪರಿಹಾರಕ್ಕೆ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಕೊಟ್ಟ ಕೊಡುಗೆ ದೊಡ್ಡದಿದೆ.
ನಗರದಲ್ಲಿ ಕುಡಿವ ನೀರಿಗೆ ತತ್ವಾರವಿತ್ತು. ನೂರಾರು ಕೊಳವೆ ಬಾವಿ ಕೊರೆಸಿದರೂ ದುರ್ಗದ ನೀರಿನ ಬವಣೆ ನೀಗಿಸಲು ಸಾಧ್ಯವಾಗತ್ತಿರಲಿಲ್ಲ. ಹಬ್ಬ, ಹರಿದಿನಗಳು ಬಂದರೆ ಜನ ಬಿಂದಿಗೆ ಹಿಡಿದು ಹಗಲು ರಾತ್ರಿ ಎನ್ನದೇ ನೀರಿಗೆ ಪರದಾಡುವುದು ಸಾಮಾನ್ಯವಾಗಿತ್ತು.
ಇಂಥ ಕಠಿಣ ಸನ್ನಿವೇಶದಲ್ಲಿ ಅವತ್ತಿನ ಕಾಲಕ್ಕೆ ಕುಡಿವ ನೀರಿಗೆ ರಾಜ್ಯದಲ್ಲೇ ಅತ್ಯಂತ ದೊಡ್ಡ ಯೋಜನೆ ಎನಿಸಿದ್ದ 90 ಕೋಟಿ ರೂ. ವೆಚ್ಚದ ದಾವಣಗೆರೆ ಜಿಲ್ಲೆ ಶಾಂತಿಸಾಗರದಿಂದ (ಸೂಳೆಕೆರೆ)ದುರ್ಗಕ್ಕೆ ನೀರು ಹರಿಸಲು ಆಗ ಸಿಎಂ ಆಗಿದ್ದ ಕೃಷ್ಣ ಅವರು ಹಸಿರು ನಿಶಾನೆ ತೋರಿಸಿದ್ದರು ಎಂದು ಮಾಜಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ನೆನಪು ಮಾಡಿಕೊಂಡಿದ್ದಾರೆ.
ಜೆ.ಎಚ್. ಪಟೇಲ್ ಸಂಪುಟದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದ ಬಚ್ಚೇಗೌಡರು ದುರ್ಗಕ್ಕೆ ಭೇಟಿ ಕೊಟ್ಟಿದ್ದರು. ಆಗ ಪಕ್ಷೇತರ ಶಾಸಕರಾಗಿ ಮೊದಲ ಬಾರಿಗೆ ಗೆದ್ದಿದ್ದ ತಿಪ್ಪಾರೆಡ್ಡಿ ನೀರಿನ ಬವಣೆ ಕುರಿತು ಚರ್ಚಿಸಿದ್ದರು. ಈ ವೇಳೆ ಬಚ್ಚೇಗೌಡರ ಜತೆ ಅಂದಿನ ನಬಾರ್ಡ್ ಅಧ್ಯಕ್ಷರು ಇದ್ದರು. ಅಧ್ಯಕ್ಷರ ಭರವಸೆಯೊಂದಿಗೆ ಬಚ್ಚೇಗೌಡರು ಯೋಜನೆಗೆ ಡಿಪಿಆರ್‌ಗೆ ಆದೇಶಿಸಿದ್ದರು.
ಇದೇ ಸಮಯಕ್ಕೆ ವಿಧಾನಸಭೆ ಚುನಾವಣೆ ಎದುರಾಗಿದ್ದರಿಂದ ಯೋಜನೆಗೆ ಹಿನ್ನಡೆಯುಂಟಾಯಿತು. 1999ರ ವಿಧಾನಸಭಾ ಚುನಾವಣೆ ಬಳಿಕ ಮುಖ್ಯಮಂತ್ರಿಯಾಗಿದ್ದ ಕೃಷ್ಣ ಅವರಿಗೆ ವೀರಪ್ಪನ್ ಕಂಟಕ ಎದುರಾಗಿತ್ತು. ವೀರಪ್ಪನ್ ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರನ್ನು ಅಪಹರಿಸಿದ್ದ. ಇದೇ ಸಮಯದಲ್ಲಿ 2 ನೇ ಬಾರಿ ಪಕ್ಷೇತರರಾಗಿ ಗೆದ್ದು ಕಾಂಗ್ರೆಸ್ ಸೇರಿದ್ದ ತಿಪ್ಪಾರೆಡ್ಡಿ ಪಕ್ಷದ ಸಭೆಗೆಂದು ಅಹಮಬಾದ್‌ಗೆ ತೆರಳಿದ್ದರು.
ಕೃಷ್ಣಾ ಅವರು ಈ ಸಭೆಗೆ ಬಾರದೆ, ರಾಜ್‌ಕುಮಾರ್ ಬಿಡುಗಡೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ವಕೀಲರು ಹಾಗೂ ಹೈಕಮಾಂಡ್ ಜತೆ ಚರ್ಚಿಸಲು ನೇರವಾಗಿ ದೆಹಲಿಗೆ ತೆರಳಿದ್ದರು. ಇದರ ಸುಳಿವರಿತ ತಿಪ್ಪಾರೆಡ್ಡಿ ಕೂಡಲೇ ದೆಹಲಿಗೆ ತೆರಳಿ ವಿಮಾನ ನಿಲ್ದಾಣದಲ್ಲೇ ಕೃಷ್ಣ ಅರನ್ನು ಭೇಟಿ ಮಾಡಿ ದುರ್ಗದ ನೀರಿನ ಸಮಸ್ಯೆ ಕುರಿತು ಚರ್ಚಿಸಿ, ಯೋಜನೆ ಮಂಜೂರಾತಿಗೆ ಮನವಿ ಮಾಡಿದ್ದರು.
ವಿಮಾನ ನಿಲ್ದಾಣದಿಂದಲೇ ಕೂಡಲೇ ಕ್ಯಾಬಿನೆಟ್ ಮುಂದೆ ವಿಷಯ ತರುವಂತೆ ಸಂಪುಟ ಕಾರ್ಯದರ್ಶಿಗೆ ಕೃಷ್ಣ ಸೂಚಿಸಿದ್ದರು. ಅಜೆಂಡಾ ಕಂಪ್ಲಿಟ್ ಆಗಿದೆ ಎಂದು ಸೆಕ್ರೆಟರಿ ಹೇಳಿದರೂ ಹೆಚ್ಚುವರಿ ವಿಷಯ ಸೂಚಿಗೆ ತರುವಂತೆ ಆದೇಶಿಸಿದ್ದರು.
ಕ್ಯಾಬಿನೆಟ್ ಒಪ್ಪಿಗೆ ಸಿಗುತ್ತಿದ್ದಂತೆ ಅಂದಿನ ಸಚಿವ ಪ್ರೊ.ಬಿ.ಕೆ. ಚಂದ್ರಶೇಖರ್ ವಿಷಯ ತಿಳಿಸಿ, ನನ್ನನ್ನು ಅಭಿನಂದಿಸಿದ್ದರು. ಯೋಜನೆ ಮಂಜೂರಾಗಿ 2007ರಲ್ಲಿ ದುರ್ಗದ ಜನರಿಗೆ ಶಾಂತಿಸಾಗರದ ನೀರು ದೊರಕುವಂತಾಯಿತು ಎಂದು ತಿಪ್ಪಾರೆಡ್ಡಿ ಸ್ಮರಿಸಿಕೊಂಡರು.
ವಿದೇಶದಿಂದ ವ್ಯಾಸಂಗ ಮುಗಿಸಿಕೊಂಡು ಬಂದ ಕೃಷ್ಣ ಅವರು ಬೆಂಗಳೂರಿನ ಆರ್‌ಸಿ ಕಾಲೇಜಿನಲ್ಲಿ ಕೆಲ ಕಾಲ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದು, ಅವರ ವಿದ್ವುತ್, ನಾಲ್ಕು ಸದನಗಳ ಸದಸ್ಯರಾಗಿದ್ದು, ಸಿಎಂ, ಕೇಂದ್ರ ಸಚಿವ ಸಹಿತ ನಾನಾ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದು, ಅವತ್ತಿನ ಕಾಲಕ್ಕೆ ಶಂಕರೇಗೌಡರಂಥ ಘಟಾನುಘಟಿಯನ್ನು ಲೋಕಸಭಾ ಚುನಾವಣೆಯಲ್ಲಿ ಸೋಲಿಸಿದ್ದು, ರಾಷ್ಟ್ರೀಯ ನಾಯಕ ನಿಜಲಿಂಗಪ್ಪ ಜತೆ ಅವರಿಗಿದ್ದ ವಿಶ್ವಾಸ ಎಲ್ಲವನ್ನೂ ನೆನಪಿಸಿಕೊಂಡ ತಿಪ್ಪಾರೆಡ್ಡಿ, ಕೃಷ್ಣ ಅವರ ನಿಧನ ರಾಜ್ಯ,ದೇಶಕ್ಕೆ ಆದ ನಷ್ಟವೆಂದು ಹೇಳಿದ್ದಾರೆ.
ಕೃಷ್ಣ ಅವರ ಅವಧಿಯಲ್ಲೇ ಭದ್ರಾಕ್ಕೆ ಆಡಳಿತಾತ್ಮಕ ಅನುಮೋದನೆ ದೊರೆಯಿತೆನ್ನಲಾಗಿದೆ.
----