ದುರ್ಗ ಬಿಟ್ಟು ಬೇರೆಡೆ ರಾಜಕಾರಣ ಮಾಡಲ್ಲ,ಕೇಂದ್ರ ಸಚಿವ

ctd 0a2
Published on

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಜನ ನನ್ನನ್ನು ಮನೆ ಮಗನಂತೆ ನೋಡಿಕೊಂಡಿದ್ದಾರೆ, ಗೆಲ್ಲಿಸಿದ್ದಾರೆ. ಈ ಜಿಲ್ಲೆ ಹೊರತು ಪಡಿಸಿ ಬೇರೆಡೆ ತೆರಳುವಂತೆ ಪಕ್ಷ ಹೇಳಿದರೂ ಹೋಗಲಾರೆ ಎಂದು ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಚಿತ್ರದುರ್ಗ ಹೊರತು ಪಡಿಸಿ ಬೇರೆಡೆ ರಾಜಕಾರಣ ಮಾಡುವುದಿಲ್ಲ. ನನ್ನ ಸೇವೆ ಏನಿದ್ದರೂ ಇಲ್ಲಿಯೇ. ಆದರೆ ಜನರಲ್ಲಿ ಸ್ಥಳೀಯರು ಸಂಸದರಾಗ ಬೇಕೆಂಬ ಯೋಚನೆ ಇದೆ. ಅವರ ಈ ಆಲೋಚನೆಗೆ ನನ್ನ ಸಂಪೂರ್ಣ ಬೆಂಬಲವಿದೆ. ಅದರ ವಿರುದ್ಧ ಕುತಂತ್ರ ಮಾಡುವಂಥವನು ನಾನಲ್ಲ. ಕೋಲಾರದಿಂದ ಸ್ಪರ್ಧಿಸುವಂತೆ ಪಕ್ಷ ಹೇಳಿದೆಯೇ ಎಂಬ ಪ್ರಶ್ನೆಗೆ, ಪಾರ್ಟಿ ಉದ್ದೇಶ ಚಿತ್ರದುರ್ಗದಲ್ಲಿ ಗೆಲುವು ಸಾಧಿಸುವುದಾಗಿ ಎಂದರು.
ಚುನಾವಣೆ ಇಂದು ವ್ಯಾಪಾರವಾಗಿದೆ. ಜನಪ್ರತಿನಿಧಿಗಳಾಗುವುದೆಂದರೆ ಹಣ ಮಾಡಲು ಎಂಬಂತಾಗಿದೆ. ಗೆದ್ದವರ ಎದುರು ಮತ ದಾರರು ಭೀಕ್ಷೆ ಬೇಡುವಂತೆ ಆಗಬಾರದು. ಮನೆ ಕಟ್ಟಲು ಲೈಸೆನ್ಸ್, ಕೊನೆಗೆ ತಾಳಿ ಕಟ್ಟಲೂ ನನ್ನ ಅನುಮತಿ ಬೇಕೆಂಬ ಮಟ್ಟಕ್ಕೆ ರಾಜಕಾ ರಣ ಮುಟ್ಟಿದೆ. ಕಮಿಷನ್‌ಗೆ ತೊಂದರೆ ಕೊಡುವರ ಬಳಿಗೆ ಅಧಿಕಾರಿಗಳು ಓಡಿ ಹೋಗುತ್ತಾರೆ ಹೊರತು,ಒಳ್ಳೆಯ ಕೆಲಸ ಮಾಡಿ ಎಂದು ಹೇಳುವವರ ಮಾತನ್ನು ನಿರ್ಲಕ್ಷಿಸುತ್ತಾರೆಂದು ಬೇಸರ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net