

ಚಿತ್ರದುರ್ಗ: ಹುಬ್ಬಳ್ಳಿಯ ಚಳಖಾಪುರದಿಂದ ಆರಂಭವಾಗಿ ಫೆ. 19ರ ವರೆಗೂ ರಾಜ್ಯದ ವಿವಿಧೆಡೆ ಸಂಚರಿಸಲಿರುವ ಹುಬ್ಬಳ್ಳಿ ಸಿದ್ಧಾರೂಢ ಶ್ರೀಗಳ ಜ್ಯೋತಿ ಯಾತ್ರೆ ಶನಿವಾರ ನಗರ ಪ್ರವೇಶಿಸಿತು. ಭಾನುವಾರ ಹೊಸದುರ್ಗದತ್ತ ಪಯಣ ಮುಂದುವರಿಸಿತು.
ಸಿದ್ಧಾರೂಢ ಮಠದ ಟ್ರಸ್ಟ್ನಿಂದ ಸಿದ್ಧಾರೂಢ ಶ್ರೀಗಳ 190ನೇ, ಗುರುನಾಥಾರೂಢರ 115ನೇ ಜಯಂತ್ಯುತ್ಸವ, ಸಿದ್ಧಾರೂಢರ ಕಥಾಮೃತ ಶತಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಕಬೀರಾನಂದ ಆಶ್ರಮದಲ್ಲಿ ದೀಪಾರಾಧನೆಯೊಂದಿಗೆ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಮದಕರಿ ವೃತ್ತ ಪ್ರವೇಶಿಸಿದ ವೇಳೆ ಭಕ್ತರು ಯಾತ್ರೆಯನ್ನು ಬರಮಾಡಿಕೊಂಡರು. ಪೂರ್ಣ ಕುಂಭ, ನಾದಸ್ವರದ ಮಂಗಳ ವಾದ್ಯದೊಂದಿಗೆ ಯಾತ್ರೆ ಕೆಲವೆಡೆ ಸಂಚರಿಸಿತು. ಮಾರ್ಗದುದ್ದಕ್ಕೂ ಸಿದ್ಧಾರೂಢರ ನಾಮಸ್ಮರಣೆ, ಜಯಘೋಷದೊಂದಿಗೆ ಸಾಗಿತು.
ಯಾತ್ರೆಯೂ ಕರ್ನಾಟಕ, ಮಹಾರಾಷ್ಟ್ರ, ಆಂಧ್ರ, ಗೋವಾ ರಾಜ್ಯಗಳ ಪ್ರಮುಖ ಜಿಲ್ಲೆಗಳಲ್ಲಿ ಸಂಚರಿಸಿದ ನಂತರ 18ರಂದು ಉಣಕಲ್ ಸಿದ್ಧಪ್ಪಜ್ಜನ ದೇಗುಲ ಮಾರ್ಗವಾಗಿ ಶ್ರೀಮಠ ತಲುಪಲಿದೆ.
20ರಿಂದ 26ರ ವರೆಗೆ ಲೋಕಕಲ್ಯಾಣಾರ್ಥ, ವಿಶ್ವಶಾಂತಿಗಾಗಿ ವಿಶ್ವ ವೇದಾಂತ ಪರಿಷತ್ ಸಮ್ಮೇಳನ ನಡೆಯಲಿದ್ದು, ನಾಡಿನ ವಿವಿಧ ಮಠಾಧೀಶರು, ಮಹಾಮಂಡಲೇಶ್ವರರು, ಸಾಧು-ಸಂತರು ಪಾಲ್ಗೊಳ್ಳದ್ದಾರೆ.
ಶಿವಲಿಂಗಾನಂದ ಶ್ರೀ, ನಿತ್ಯಾನಂದ ಶ್ರೀ, ಆಶ್ರಮದ ಕಾರ್ಯದರ್ಶಿ ವಿ.ಎಲ್.ಪ್ರಶಾಂತ್, ಯಾತ್ರೆ ಟ್ರಸ್ಟ್ ಸದಸ್ಯರಾದ ಶಂಕರಗೌಡ ಎಚ್.ಸಂಗೊಂದಿ, ಈರಣ್ಣ ಎಸ್.ಪಾಳೇದ, ಶಿವಮೂರ್ತಿ ಶಿವಸಿಂಪಿ, ಗಣಪತಿ ಶಾಸ್ತ್ರಿ, ತಿಪ್ಪೇಸ್ವಾಮಿ, ನಿರಂಜನಮೂರ್ತಿ, ಈರಣ್ಣ, ವಿ.ಎಲ್.ಪ್ರವೀಣ್ ಇತರರಿದ್ದರು.