

ಚಿತ್ರದುರ್ಗ: ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿ ವಿಶ್ವಗುರು ಬಸವಣ್ಣ ಅವರ ಜನ್ಮಸ್ಥಳ ಬಸವನ ಬಾಗೇವಾಡಿಯಿಂದ ಬೆಂಗಳೂರಿಗೆ ಹೊರಟಿರುವ ರಾಜ್ಯ ಅಂಗವಿಕಲರ ಒಕ್ಕೂಟದ ಪದಾಧಿಕಾರಿಗಳ ಬೈಕ್ ರ‌್ಯಾಲಿ ಬುಧವಾರ ಚಿತ್ರದುರ್ಗ ಪ್ರವೇಶಿಸಿತು.
ಮೊಪೈಡ್ ತ್ರಿಚಕ್ರ ವಾಹನಗಳಲ್ಲಿ ಆಗಮಿಸಿದ ಅಂಗವಿಕಲರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಕೆಲಕಾಲ ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಮಲ್ಲಿಕಾರ್ಜುನ್ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾರ ಅಂಗವಿಕಲರನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಹೀಗಾಗಿ ನಾವೆಲ್ಲರೂ ಬೀದಿಗೆ ಬರುವ ಸ್ಥಿತಿ ನಿರ್ಮಾಣವಾಗಿದೆ. ನಮ್ಮ ಸಮಸ್ಯೆಗಳ ಕುರಿತು ವಿಧಾನಸಭೆ, ವಿಧಾನ ಪರಿಷತ್‌ನಲ್ಲಿ ಧ್ವನಿ ಎತ್ತುವವರೇ ಇಲ್ಲ. ಮತ ಬ್ಯಾಂಕ್‌ಗೆ ಸೀಮಿತ ಮಾಡಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಅಂಗವಿಕಲರ ಬ್ಯಾಕ್‌ಲಾಗ್ ಹುದ್ದೆ ಕೂಡಲೇ ಭರ್ತಿ ಮಾಡಬೇಕು. ರಾಜಕೀಯ ಮೀಸಲಾತಿ ನೀಡಬೇಕು. ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹಿಸಬೇಕು. ನವೋದಯ, ಸೈನಿಕ ಸೇರಿ ವಸತಿ ಶಾಲೆಗಳಲ್ಲಿ ವ್ಯಾಸಂಗ ಮಾಡಲು ಸೀಟುಗಳನ್ನು ಮೀಸಲಿಡಬೇಕು ಎಂದು ಆಗ್ರಹಿಸಿದರು.
ಮಾಸಿಕ 6 ಸಾವಿರ ರೂ. ಮಾಸಾಶನ ನೀಡಬೇಕು. ಪ್ರತ್ಯೇಕ ಸಚಿವಾಲಯ ಸ್ಥಾಪಿಸಿ ರಾಜ್ಯಾದ್ಯಂತ ಸಂಚರಿಸಲು ಉಚಿತ ಬಸ್ ಪಾಸ್ ಸೌಲಭ್ಯ ಕಲ್ಪಿಸಬೇಕು. ಅಂಗವಿಕಲರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ ಬಗೆಹರಿಸಲು ಸರ್ಕಾರ ಮುಂದಾಗಬೇಕು ಎಂದು ಕೋರಿದರು.
ಕರ್ನಾಟಕ ಶಾಂತಿ ಮತ್ತು ಸೌಹಾರ್ದ ವೇದಿಕೆ ಅಧ್ಯಕ್ಷ ನರೇನಹಳ್ಳಿ ಅರುಣ್‌ಕುಮಾರ್, ಕಣಿವೆಮಾರಮ್ಮ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ತಿಪ್ಪಮ್ಮ, ಮಾರುತಿ, ತಿಪ್ಪೇಸ್ವಾಮಿ, ನಾಗರಾಜು, ಸುಭಾಸ ಹುಲಬೆಂಚ್, ಮಲ್ಲು ಬಿರಾದಾರ, ಪಿ.ಮಂಜುನಾಥ, ರುದ್ರಮುನಿ ತೋಪುರಮಾಳಿಗೆ, ಲೇಖಕ ಎಚ್.ಆನಂದಕುಮಾರ್, ಜೈ ಪ್ರಕಾಶ್ ಇತರರಿದ್ದರು.