ದುರ್ಗ, ತುಮಕೂರಲ್ಲಿ ವಸತಿ ನಿರ್ಮಾಣಕ್ಕೆ ಕ್ರಮ

CTD GOVINDA M.KARAJOLA--0003
Published on

ಚಿತ್ರದುರ್ಗ: ಪ್ರಧಾನಮಂತ್ರಿ ಆವಾಸ್ ಯೋಜನೆ (ಗ್ರಾಮೀಣ) ವಸತಿ ಯೋಜನೆಯಡಿ ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಬಡವರಿಗೆ ವಸತಿ ಒದಗಿಸಲು ಸಮೀಕ್ಷೆ ನಡೆದಿದೆಯೇ ಎಂದು ಸಂಸದ ಗೋವಿಂದ ಎಂ.ಕಾರಜೋಳ ಅವರು ಸೋಮವಾರ ಸಂಸತ್ತಿನಲ್ಲಿ ಪ್ರಶ್ನಿಸಿದ್ದಾರೆ.
ಈ ಯೋಜನೆಯಡಿ ಎರಡೂ ಜಿಲ್ಲೆಗಳಿಗೆ ಕಳೆದ ಐದು ವರ್ಷಗಳಲ್ಲಿ ಎಷ್ಟು ಮನೆಗಳು ಮಂಜೂರಾಗಿವೆ? ಎಷ್ಟು ಮಂಜೂರಾತಿ ಬಾಕಿ ಇದೆ. ಎಷ್ಟು ಅನುದಾನ ಮಂಜೂರಾಗಿದೆ? ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಯಾವ ಕ್ರಮ ಕೈಗೊಂಡಿವೆ ಎಂಬ ಪ್ರಶ್ನೆಗಳಿಗೆ ಕೇಂದ್ರ ಗ್ರಾಮೀಣಾಭಿವೃದ್ಧಿ ಖಾತೆ ರಾಜ್ಯ ಸಚಿವ ಡಾ.ಚಂದ್ರಶೇಖರ ಪೆಮ್ಮಸಾನಿ ಅವರು ಉತ್ತರಿಸಿದ್ದಾರೆ.
ವಸತಿ ರಹಿತರನ್ನು ಗುರುತಿಸಲು 2011ರ ಸಾಮಾಜಿಕ ಆರ್ಥಿಕ ಜಾತಿ ಗಣತಿ ಸೂಚಿಸಿದ ಮಾನದಂಡಗಳನ್ನು ಅನುಸರಿಸಲಾಗುತ್ತಿದ್ದು, ಗ್ರಾಮಸಭೆಗಳ ಮೂಲಕ ಫಲಾನುಭವಿಗಳನ್ನು ಅಂತಿಮಗೊಳಿಸಲಾಗುತ್ತದೆ. 2018ರ ಜನವರಿಯಿಂದ 2019ರ ಮಾರ್ಚ್‌ವರೆಗೆ ಆವಾಸ್ ಯೋಜನೆ ಸಮೀಕ್ಷೆ ನಡೆಸಲಾಗಿದೆ. ಇದರಲ್ಲಿ ಬಿಟ್ಟು ಹೋದವರನ್ನು ಹೆಚ್ಚುವರಿ ಪಟ್ಟಿಗೆ ಸೇರಿಸಲಾಗಿದೆ. 3.90 ಕೋಟಿ ಅರ್ಹ ಕುಟುಂಬಗಳನ್ನು ಸಮೀಕ್ಷೆಯಲ್ಲಿ ನೋಂದಾಯಿಸಿದ್ದು, ಗ್ರಾಮಸಭೆಗಳ ಬಳಿಕ 2.95 ಕೋಟಿ ಕುಟುಂಬಗಳು ವಸತಿಗೆ ಅರ್ಹವಾಗಿದ್ದು, ಈ ಗುರಿಯನ್ನು ವಿವಿಧ ರಾಜ್ಯಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಮಾಹಿತಿ ಒದಗಿಸಿದ್ದಾರೆ.
ಇದಕ್ಕೆ ಪೂರಕವಾಗಿ 2.94 ಕೋಟಿಗೂ ಅಧಿಕ ಮನೆಗಳನ್ನು ಮಂಜೂರು ಮಾಡಲಾಗಿದೆ, 2.64 ಕೋಟಿ ಮನೆಗಳನ್ನು ನಿರ್ಮಿಸಲಾಗಿದೆ. ಗಣತಿ, ಸಮೀಕ್ಷೆಯಂತೆ ಚಿತ್ರದುರ್ಗದಲ್ಲಿ 56,605, ತುಮಕೂರಲ್ಲಿ 77,871 ಅರ್ಹ ಕುಟುಂಬಗಳು ವಸತಿ ಬೇಡಿಕೆ ಪಟ್ಟಿಯಲ್ಲಿವೆ.
20 16-17ರಿಂದ 2023-24ರವರೆಗೆ ಚಿತ್ರದುರ್ಗಕ್ಕೆ ಅಂದಾಜು 1895 ಮನೆಗಳು ಹಾಗೂ ತುಮಕೂರಿಗೆ ಅಂದಾಜು 1548 ಮನೆಗಳು ಮಂಜೂರಾಗಿವೆ. ಇವುಗಳ ಪೈಕಿ ಶೇ.30 ಮನೆಗಳ ನಿರ್ಮಾಣ ಪೂರ್ಣಗೊಂಡಿಲ್ಲ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net