

ಹಾಸನ: ದುರುದ್ದೇಶದಿಂದ ಪೇ ಸಿಎಂ ಅಭಿಯಾನ ನಡೆಸುತ್ತಿರುವ ಕಾಂಗ್ರೆಸಿಗರು ತಾಕತ್ತಿದ್ದರೆ ದಾಖಲೆ ಒದಗಿಸಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಗುತ್ತಿಗೆದಾರ ಕಮಿಷನ್ ಕೊಟ್ಟಿದ್ದಾನೆ ಎಂಬುದನ್ನು ಬಹಿರಂಗ ಪಡಿಸಲಿ. ಸುಮ್ಮನೆ ಟಿವಿ ಮುಂದೆ ಬಾಯಿ ಬಡಿದುಕೊಳ್ಳುವುದಲ್ಲ. ನಿಮಗೆ ಧೈರ್ಯ ಇದ್ದರೆ ಯಾರು ಲಂಚ ತೆಗೆದುಕೊಂಡಿದ್ದಾರೆ ಎಂಬುದನ್ನು ದಾಖಲೆ ಸಹಿತ ಸಾಬೀತುಪಡಿಸಿ ಎಂದು ಸವಾಲು ಹಾಕಿದರು.
ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಅವರೇನು ಸತ್ಯಹರಿಶ್ಚಂದ್ರರೆ? ಕಾಂಗ್ರೆಸ್ ನಾಯಕರಿಗೆ ಬೇರೆ ಕೆಲಸವಿಲ್ಲ, ಹಾಗಾಗಿ ಇಲ್ಲದ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದರು.
ಅಧಿಕಾರಕ್ಕಾಗಿ ಕಾಂಗ್ರೆಸ್ ಆರಂಭಿಸಿರುವ ಭಾರತ್ ಜೋಡೋ ಪಾದಯಾತ್ರೆ ಯಶಸ್ವಿಯಾಗದು ಮತ್ತು ಅವರು ಈ ದೇಶದ ಹಾಗೂ ರಾಜ್ಯದ ಚುಕ್ಕಾಣಿ ಹಿಡಿಯಲು ಸಾಧ್ಯವಿಲ್ಲ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿ ಬಿಜೆಪಿ ಸರ್ಕಾರಗಳು ಉತ್ತಮ ಆಡಳಿತ ನೀಡುತ್ತಿವೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಭಾರಿ ಬಹುಮತದಿಂದ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಆತ್ಮಗೌರವ ಇರುವ ಯಾರೂ ಕಾಂಗ್ರೆಸ್‌ಗೆ ಹೋಗುವುದಿಲ್ಲ. ಯಾವುದೇ ಸವಾಲು ಬಂದರೂ ನಮ್ಮ ಸರ್ಕಾರ ಎದುರಿಸಲು ಸಿದ್ಧವಿದೆ. ಕೋವೀಡ್ ಸಂದರ್ಭದಲ್ಲಿ ನಮ್ಮ ಕೇಂದ್ರ ಸರ್ಕಾರ ಮಾಡಿದ ಕೆಲಸವನ್ನು ಇಡೀ ಜಗತ್ತೇ ನೋಡಿ ಮೆಚ್ಚಿಕೊಂಡಿದೆ. ದೇಶದ ವಿಜ್ಞಾನಿಗಳಿಗೆ ಕರೆ ನೀಡಿ ಒಂದೇ ವರ್ಷದಲ್ಲಿ ಲಸಿಕೆ ಕಂಡು ಹಿಡಿಯಲು ಕಾರಣಕರ್ತರಾದವರು ಪ್ರಧಾನಿ ಮೋದಿ. ಇದು ಸಾಮಾನ್ಯ ವಿಚಾರವಲ್ಲ ಎಂದು ಕೊಂಡಾಡಿದರು.
ದೇಶದ ಪ್ರತಿ ಮನೆಯಲ್ಲೂ ಯಾರಾದರೊಬ್ಬರು ಕೇಂದ್ರ ಸರ್ಕಾರದ ವಿವಿಧ ಯೋಜನೆಯ ಫಲಾನುಭವಿಗಳಾಗಿದ್ದಾರೆ. ರಯತರ ಖಾತೆಗೆ ನೇರವಾಗಿ ಹಣ ಹಾಕುವ ಕೆಲಸ ಮಾಡಿದ್ದು ನರೇಂದ್ರ ಮೋದಿಯವರು. 33 ಲಕ್ಷ ಜನರಿಗೆ ಉಚಿತ ಅಡುಗೆ ಅನಿಲ ಸಂಪರ್ಕ ಕಲ್ಪಿಸಲಾಗಿದೆ. ಕೊರೊನಾ ಸಂದರ್ಭದಲ್ಲಿ 80 ಕೋಟಿ ಜನರಿಗೆ ಕೇಂದ್ರ ಸರ್ಕಾರ ಐದು ಕೆಜಿ ಅಕ್ಕಿ, ಬೆಳೆ ಕೊಟ್ಟಿದೆ. ಕಾಂಗ್ರೆಸ್‌ನವರಿಗೆ ಬೇರೆ ಕೆಲಸ ಇಲ್ಲದೆ ಭಾರತ್ ಜೋಡೋ ಯಾತ್ರೆ ಮಾಡುತ್ತಿದ್ದಾರೆ. ಇದರಲ್ಲಿ ಅವರು ಯಶಸ್ಸು ಕಾಣಲು ಸಾಧ್ಯವಿಲ್ಲ ಎಂದರು.