

ದುರಾಡಳಿತಕ್ಕೆ ಬೇಸತ್ತು ಅವಿಶ್ವಾಸ
ವಿಜಯವಾಣಿ ಸುದ್ದಿಜಾಲ ಸಂಕೇಶ್ವರ: ದಿ. ಹುಕ್ಕೇರಿ ಗ್ರಾಮೀಣ ವಿದ್ಯುತ ಸಹಕಾರಿ ಸಂಘದಲ್ಲಿ ಬಹಳ ವರ್ಷಗಳಿಂದ ನಡೆಯುತ್ತಿರುವ ದುರಾಡಳಿತಕ್ಕೆ ಬೇಸತ್ತು ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ೧೧ ಜನ ನಿರ್ದೇಶಕರ ಮಂಡಳಿಯವರು ಹೊರಗೆ ಬಂದು ಅವಿಶ್ವಾಸ ನಿರ್ಣಯ ಮಂಡಿಸಿದ್ದೇವೆ ಎಂದು ನಿರ್ದೇಶಕರು ತಿಳಿಸಿದ್ದಾರೆ.
ಶನಿವಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹಲವಾರು ವರ್ಷಗಳಿಂದ ಸಮಸ್ಯೆಗಳನ್ನು ಹೇಳುತ್ತಾ ಬಂದಿದ್ದರೂ, ಅದಕ್ಕೆ ಸ್ಪಂದನೆ ಸಿಗಲಿಲ್ಲ. ಹೀಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿಯವರ ಸಹಾಯ ಸಹಕಾರ ತೆಗೆದುಕೊಂಡು ಮುಂದಿನ ಕಡಿಮೆ ಅವಧಿಯಲ್ಲಿ ತೋಟಪಟ್ಟಿಗಳಿಗೆ ನಿರಂತರ ಜ್ಯೋತಿ ೨೪ ಘಂಟೆ ವಿದ್ಯುತ ಕೊಡುವ ವ್ಯವಸ್ಥೆ ನಾವು ಮಾಡುತ್ತೇವೆ ಎಂದರು.
ನಿರ್ದೇಶಕ ರವೀಂದ್ರ ಹಿಡಕಲ್ ಮಾತನಾಡಿ ವಿದ್ಯುತ್ ಕಂಬ ಮುರಿದರೆ ರೈತರಿಂದ ಬಹಳಷ್ಟು ಹಣ ವಸೂಲಿ ಮಾಡಲಾಗುತ್ತಿತ್ತು. ಇದನ್ನು ಮನಗಂಡು ರೈತರಿಗೆ ತೊಂದರೆ ಆಗಬಾರದೆಂದು ಕಡಿಮೆ ದರದಲ್ಲಿ ವಿದ್ಯುತ್ ಕಂಬಗಳನ್ನು ಕೊಡಲು ನಾವೇಲ್ಲ ನಿರ್ದರಿಸಿದ್ದೇವೆ. ರೈತರು ಯಾರ ಮನೆಗೂ ಹೋಗದೇ ತಮ್ಮ ತಮ್ಮ ಕ್ಷೇತ್ರ ನಿರ್ದೇಶಕರಿಗೆ ಸಂಪರ್ಕಿಸಿದರೆ ಕೆಲಸಗಳನ್ನು ಅತೀ ಶೀಘ್ರವಾಗಿ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.
ನಿರ್ದೇಶಕ ಜಯಗೌಡ ಪಾಟೀಲ,ಶಶಿರಾಜ ಪಾಟೀಲ,
ಮಾತನಾಡಿ ಸಂಘದ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆಯನ್ನು ಸರ್ಕಾರದವರು ನಿಗಧಿಪಡಿಸಿದ್ದಾರೆ. ಅವಿಶ್ವಾಸ ಮಂಡನೆಗೆ ೧೧ ಜನ ನಿರ್ದೇಶಕರು ಅರ್ಜಿಯನ್ನು ಸಂಘದ ಅಧಿಕಾರಿಗೆ ತಲುಪಿಸಲಾಗಿದೆ. ಈ ವಿಷಯಕ್ಕೆ ಸಂಬಂಧಪಟ್ಟಂತೆ ಕೆಲವು ಜನ ಅಪಪ್ರಚಾರ ಮಾಡುತ್ತಿದ್ದು ಆ ಜನರನ್ನು ನಂಬಬಾರದು. ರೈತರ ಏಳಿಗೆಗಾಗಿ ನಾವು ೨೪ ಘಂಟೆ ಸದಾ ಕೆಲಸ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ನಿರ್ದೇಶಕರಾದ ವಿಷ್ಣು ರೇಡೆಕರ, ಬಸಗೌಡ ಮೆಗೆನ್ನವರ, ಜೋಮಲಿಂಗ ಪಾಟೀಲ, ರವೀಂದ್ರ ಅಸೊದೆ, ಸೋಮಲಿಂಗ ಪಾಟೀಲ, ಈರಪ್ಪ ಬಂಜಿರಾಮ,ಅಶೋಕ ಚಂದಪ್ಪಗೋಳ, ಕುನಾಲ ಪಾಟೀಲ ಇದ್ದರು.