ದುರಾಡಳಿತ ನಿಲ್ಲಿಸದಿದ್ದರೆ ರಾಜೀನಾಮೆ ಕೊಡಿ

CTD BJP STRIKE....
Published on

ಚಿತ್ರದುರ್ಗ: ಕಾಂಗ್ರೆಸ್ಸಿನಂಥ ಕೆಟ್ಟ ಸರ್ಕಾರ, ಕಳೆದ 75 ವರ್ಷಗಳಲ್ಲಿ ರಾಜ್ಯದಲ್ಲಿ ಆಡಳಿತ ನಡೆಸಿಲ್ಲವೆಂದು ಸಂಸದ ಗೋವಿಂದ ಎಂ. ಕಾರಜೋಳ ಹೇಳಿದರು.

ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ರಾಜ್ಯಸರ್ಕಾರದ ವಿರುದ್ಧ ಬಿಜೆಪಿ ಶನಿವಾರ ನಗರದ ವೀರ ವನಿತೆ ಒನಕೆ ಓಬವ್ವ ವೃತ್ತ ದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅವರು, ಬೆಲೆ ಏರಿಕೆ, ಗಾಳಿ ಹೊರತುಪಡಿಸಿ ಎಲ್ಲದ್ದಕ್ಕೂ ತೆರಿಗೆ ಹಾಕಿರುವುದೇ ಈ ಸರ್ಕಾರದ ಸಾಧನೆಯಾಗಿದೆ ಎಂದು ಟೀಕಿಸಿದರು.

ಸದನದಲ್ಲಿ ಹನಿಟ್ರಾೃಫ್, ಸಿಡಿ, ಪೆನ್‌ಡ್ರೈವ್ ಫ್ಯಾಕ್ಟರಿ ವಿಚಾರ ಪ್ರಸ್ತಾಪವಾಗಿದೆ. ಈ ಸರ್ಕಾರ ಅನೈತಿಕ ಮತ್ತು ಭ್ರಷ್ಟಾಚಾರದಿಂದ ಕೂಡಿದೆ. ಭ್ರಷ್ಟಾಚಾರ ಮಿತಿ ಮೀರಿದೆ. ಹಲವು ಗುತ್ತಿಗೆದಾರರು, ಅಧಿಕಾರಿ, ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಿಜೆಪಿ ಕಾರ್ಯಕರ್ತನ ಆತ್ಮಹತ್ಯೆಗೆ ಸಂಬಂಧಿಸಿದಂತೆ ಇಬ್ಬರು ಶಾಸಕರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಆಡಳಿತ ನಡೆಯಬೇಕೇ ಹೊರತು ಸಂವಿಧಾನ ವಿರೋಧಿಯಾಗಿ ಅಲ್ಲ. ಧರ್ಮಾಧಾರಿತ ಮೀಸಲು ವ್ಯವಸ್ಥೆಯನ್ನು ಡಾ.ಬಿ.ಆರ್.ಅಂಬೇಡ್ಕರ್ ಒಪ್ಪಿಲ್ಲ. ಮೀಸಲು ವ್ಯವಸ್ಥೆ ಇರುವುದು ಶೋಷಿತರು, ಬಡವರ ಏಳಿಗೆಗೆ ಎಂದರು.

ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನ 38 ಸಾವಿರ ಕೋಟಿ ರೂ. ವೋಟ್‌ಬ್ಯಾಂಕ್ ರಾಜಕಾರಣಕ್ಕೆ ದುರ್ಬಳಕೆ ಆಗಿದೆ. ಹೀಗಾಗಿ ಸಿದ್ದರಾಮಯ್ಯ ಅಹಿಂದ ನಾಯಕರೆಂದು ಕರೆಸಿಕೊಳ್ಳುವ ಅರ್ಹತೆ ಕಳೆದುಕೊಂಡಿದ್ದಾರೆ. ಕೂಡಲೆ ಬೆಲೆ ಏರಿಕೆ ಹಿಂಪಡೆಯಬೇಕು. ದುರಾಳಿಡಳಿತ ನಿಲ್ಲಬೇಕು. ಇದು ಆಗದಿದ್ದಲ್ಲಿ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.

ಮಾಜಿ ಸಚಿವ ಎನ್. ಮಹೇಶ್ ಮಾತನಾಡಿ, ರಾಜ್ಯದಲ್ಲಿ ದಲಿತ, ಸಂವಿಧಾನ ಹಾಗೂ ಜನ ವಿರೋಧಿ ಸರ್ಕಾರವಿದೆ. ಬಿಜೆಪಿ ವಿರುದ್ಧ ಕಾಂಗ್ರೆಸ್ ಶೇ.40 ಕಮಿಷನ್ ಆರೋಪ ಮಾಡಿತ್ತು. ಈ ಹಣದಲ್ಲಿ ಐದು ಗ್ಯಾರಂಟಿಗಳಿಗೆ 52 ಸಾವಿರ ಕೋಟಿ ರೂ.ಹೊಂದಿಸುವುದಾಗಿ ಹೇಳಿತ್ತು. ಆದರೆ, ಆರೋಪಕ್ಕೆ ಸಾಕ್ಷಾೃಧಾರಗಳಿಲ್ಲವೆಂದು ತನಿಖಾ ಸಂಸ್ಥೆಗಳು ಹೇಳಿವೆ. ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನ ದುರ್ಬಳಕೆ ಮಾಡಿಕೊಂಡಿರುವ ಈ ಸರ್ಕಾರ ಮುಸ್ಲಿಮರಿಗೆ ಶೇ.4 ಮೀಸಲು ನೀಡಿ ಸಂವಿಧಾನ ವಿರೋಧಿಯಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಸಂಸದ ಮುನಿಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಬಹುಸಂಖ್ಯಾತರಿಗೆ ರಕ್ಷಣೆ ಇಲ್ಲವಾಗಿದೆ. ತುಘಲಕ್ ದರ್ಬಾರ್ ನಡೆಯುತ್ತಿದೆ. ನೀವು ಅಹಿಂದ ವಿರೋಧಿ, ನಿಮ್ಮ ಪಕ್ಷದವರನ್ನೇ ಸೋಲಿಸಿದ ಅಪಕೀರ್ತಿ ನಿಮ್ಮ ಮೇಲಿದೆ ಎಂದು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು. ಧಮ್ ಇದ್ದರೆ ರಾಜೀನಾಮೆ ನೀಡಿ ಚುನಾವಣೆ ಎದುರಿಸಲಿ ಎಂದರು.

ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಮಾತನಾಡಿ, ಎಲ್ಲ ಆಯಾಮಗಳಲ್ಲೂ ವಿಫಲವಾಗಿರುವ ಈ ಸರ್ಕಾರಕ್ಕೆ ಜನರು ಛೀಮಾರಿ ಹಾಕುತ್ತಿದ್ದಾರೆ ಎಂದರು.

ಶಾಸಕ ಡಾ.ಎಂ. ಚಂದ್ರಪ್ಪ, ಮಾಜಿ ಶಾಸಕ ಎಸ್.ಕೆ. ಬಸವರಾಜನ್, ಪಕ್ಷದ ಜಿಲ್ಲಾಧ್ಯಕ್ಷ ಎ. ಮುರುಳಿ, ಮಲ್ಲಿಕಾರ್ಜುನ್, ಸಂಪತ್ ಕುಮಾರ್, ಕೆ.ಟಿ. ಕುಮಾರಸ್ವಾಮಿ, ಜಯಪಾಲಯ್ಯ, ಡಾ. ಸಿದ್ದಾರ್ಥಗುಂಡಾರ್ಫಿ, ಲೋಕೇಶ್, ನಾಗರಾಜ್, ಮೋಹನ್, ಭಾರ್ಗವಿ ದ್ರಾವಿಡ್, ಶ್ರೀ ರಾಮರೆಡ್ಡಿ, ಮಲ್ಲೇಶ್, ಅಭಿನಂದನ್, ಸುರೇಶ್, ಜಗದೀಶ್, ನಾಗರಾಜ್‌ಬೇದ್ರೆ, ದಗ್ಗೆ ಶಿವಪ್ರಕಾಶ್, ಚಂದ್ರು, ಜಯಪಾಲಯ್ಯ, ಶ್ಯಾಮಲಾ ಶಿವಪ್ರಕಾಶ್, ಬಸಮ್ಮ ಮತ್ತಿತರರು ಪ್ರತಿಭಟನೆಯಲ್ಲಿದ್ದರು.

ಕೋಟ್

ದರ ಏರಿಕೆ, ರೈತರ ಸಂಕಷ್ಟಗಳ ಕುರಿತಂತೆ ಸದನದಲ್ಲಿ ಚರ್ಚಿಸಲು ಮುಂದಾಗಿದ್ದಕ್ಕೆ ಬಜೆಪಿಯ 18 ಶಾಸಕರನ್ನು ಸಸ್ಪೆಂಡ್ ಮಾಡಲಾಗಿದೆ. ಎಲ್ಲ ವಸ್ತುಗಳ ಬೆಲೆಗಳು ಏರಿಕೆಯಾಗಿವೆ. ಸಿದ್ದರಾಮಯ್ಯ ಯಾವ ಪುರುಷಾರ್ಥಕ್ಕಾಗಿ ಸಿಎಂ ಆಗಿ ಮುಂದುವರಿಯಬೇಕು? ರಾಜ್ಯದ ಆರೂವರೆ ಕೋಟಿ ಜನರ ಶಾಪ ತಟ್ಟದೇ ಬಿಡುವುದಿಲ್ಲ. ಮೆಜಾರಿಟಿ ಕಾರಣಕ್ಕೆ ಮನಸೋ ಇಚ್ಛೆ ಬೆಲೆ ಏರಿಸಲಾಗುತ್ತಿದೆ. ಕೂಡಲೇ ಬೆಲೆ ಏರಿಕೆ ಹಾಗೂ ಶಾಸಕರ ಅಮಾನತು ಹಿಂಪಡೆಯಬೇಕು.

ಡಾ.ಎಂ. ಚಂದ್ರಪ್ಪ, ಶಾಸಕ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net