ದುರಸ್ತಿಯಾಗದ ಜಿಲ್ಲೆಯ ಫುಟ್ಬಾಲ್ ಮೈದಾನ

Published on

ಬಳ್ಳಾರಿ : ಜಿಲ್ಲೆಯಲ್ಲಿ ಫುಟ್ಬಾಲ್ ಕ್ರೀಡಾಂಗಣವು ಕಳೆದ ಎರಡು ವರ್ಷಗಳಿಂದ ಸೂಕ್ತ ನಿರ್ವಹಣೆಯಿಲ್ಲದೆ ಸೊರಗುತ್ತಿದ್ದು, ಗಮನ ಹರಿಸಬೇಕಾದ ಅಧಿಕಾರಿಗಳು ದುರಸ್ತಿಗೊಳಿಸುತ್ತಿಲ್ಲ ಎಂಬುದು ಕ್ರೀಡಾಪಟುಗಳು ಬೇಸರಕ್ಕೆ ಕಾರಣವಾಗಿದೆ.
ಕಲ್ಯಾಣ ಕರ್ನಾಟಕದಲ್ಲಿ ಅತ್ಯಾಧುನಿಕ ಸುಸಜ್ಜಿತ ಸಿಂಥೆಟಿಕ್ ಹಾಗೂ ಹೊನಲು ಬೆಳಕಿನ ವ್ಯವಸ್ಥೆಯುಳ್ಳ ಫುಟ್ಬಾಲ್ ಕ್ರೀಡಾಂಗಣ ಇರುವುದು ಜಿಲ್ಲೆಯಲ್ಲಿ ಮಾತ್ರ. ಆದರೆ, ಕಳೆದ ಎರಡು ವರ್ಷಗಳಿಂದ ಇಲ್ಲಿ ಯಾವುದೇ ಪಂದ್ಯಗಳನ್ನು ಆಯೋಜಿಸಿಲ್ಲ. ಪರಿಣಾಮ ಕ್ರೀಡಾಂಗಣ ಧೂಳು ಹಿಡಿದಿದ್ದು, ಲೈಟ್‌ಗಳು ಹಾಳಾಗಿ, ಸ್ವಚ್ಛತೆ ಮರೀಚಿಕಿಯಾಗಿದ್ದು ಇಷ್ಟೆಲ್ಲ ಆದರೂ ಅಭಿವೃದ್ಧಿ ಬಗ್ಗೆ ಗಮನಹರಿಸಬೇಕಾದ ಅಧಿಕಾರಿಗಳು ವಿವಿಧ ನೆಪ ಹೇಳುತ್ತಿರುವುದು ಗೋಚರಿಸಿದೆ.
2014 ರಲ್ಲಿ ಆರಂಭ : ಜಿಲ್ಲಾಡಳಿತ ಮತ್ತು ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯಿಂದ 2014 ರಲ್ಲಿ ಕ್ರೀಡಾಂಗಣ ನಿರ್ಮಿಸಿದ್ದು, ಆರಂಭದಲ್ಲಿ ಕೆಲ ಪಂದ್ಯಗಳನ್ನು ಇಲ್ಲಿ ಆಯೋಜಿಸಲಾಗಿತ್ತು. ಇದಾದ ಬಳಿಕ ಇಲ್ಲೊಂದು ಕ್ರೀಡಾಂಗಣ ಇತ್ತು ಎಂಬುದೇ ಮರೆತು ಹೋಗುವಷ್ಟರ ಮಟ್ಟಿಗೆ ದಿವ್ಯ ನಿರ್ಲಕ್ಷ್ಯ ತಳೆಯಲಾಗಿದೆ. ದಿನವಿಡೀ ಉದ್ಯೋಗ ಹಾಗೂ ಇತರೆ ಕೆಲಸಗಳಿಂದ ದಣಿವರಿಯುವ ಕ್ರೀಡಾಪ್ರೇಮಿಗಳು, ಸಾರ್ವಜನಿಕರು, ಕಾಲೇಜು ವಿದ್ಯಾರ್ಥಿಗಳು, ಯುವಕರು ಹೊನಲು ಬೆಳಕಿನ ಪಂದ್ಯಗಳನ್ನು ನೋಡಿ ಸಂತಸಪಡುತ್ತಿದ್ದರು. ಫುಟ್ಬಾಲ್ ಕ್ರೀಡಾಂಗಣಕ್ಕೆ ಆರಂಭದಲ್ಲಿ ನಡೆದ ಪಂದ್ಯಗಳಿಗೆ ಮಾತ್ರ ಹೊನಲು ಬೆಳಕಿನ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಕಳೆದ ಹಲವು ವರ್ಷಗಳಿಂದ ಲೈಟಿಂಗ್ ವ್ಯವಸ್ಥೆ ಇಲ್ಲ. ಇದರಿಂದಾಗಿ ಕ್ರೀಡಾಪಟುಗಳು ಬೆಳಗಿನ ವೇಳೆ ಮಾತ್ರ ಅಭ್ಯಾಸ ಮಾಡುವಂತಾಗಿದೆ. ಇನ್ನೊಂದೆಡೆ ಹೊನಲು ಬೆಳಕಿನ ಪಂದ್ಯಗಳು ನಡೆಯದ ಕಾರಣ ಕ್ರೀಡಾಪ್ರೇಮಿಗಳಲ್ಲಿ ಬೇಸರ ಉಂಟುಮಾಡಿದೆ.
ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟರ್ಫ್ ಅಳವಡಿಸಲಾಗಿದ್ದು, ಸೂಕ್ತ ನಿರ್ವಹಣೆ ಇಲ್ಲದ ಕಾರಣ ಅದು ಹಾಳಾಗಿವೆ. ಸ್ಪಿಂಕ್ಲರ್ ವ್ಯವಸ್ಥೆಯೂ ಇಲ್ಲಿಲ್ಲ. ಸಿಂಥೆಟಿಕ್ ಮ್ಯಾಟ್‌ಗಳನ್ನು ಬದಲಿಸದೇ ವರ್ಷಗಳೇ ಕಳೆದಿವೆ. ಮ್ಯಾಟ್ ಬದಲಾವಣೆ ಮಾಡದ ಕಾರಣ ಅಭ್ಯಾಸ ಮಾಡುವ ಸಂದರ್ಭದಲ್ಲಿ ಕೆಲವರು ಗಾಯ ಮಾಡಿಕೊಂಡಿರುವ ಉದಾಹರಣೆಗಳೂ ಇವೆ. ಒಂದು ಭಾಗದಲ್ಲಿ ಆಸನ ವ್ಯವಸ್ಥೆಗೆ ಶೆಲ್ಟರ್ ಅಳವಡಿಸಿದ್ದರೆ, ಇನ್ನೊಂದು ಭಾಗದಲ್ಲಿ ಈ ಕಾರ್ಯವಾಗಿಲ್ಲ ಬಿಸಿಲಿನಲ್ಲಿ ಕುಳಿತು ವೀಕ್ಷಣೆ ಮಾಡಬೇಕು. ಕ್ರೀಡಾಂಗಣ ತುಂಬ ಶ್ವಾನಗಳ ಓಡಾಟ ಸಾಮಾನ್ಯವಾಗಿದ್ದು, ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ. ಬೇರೆ ಜಿಲ್ಲೆಗಳಲ್ಲಿ ನಡೆಯುವ ಪಂದ್ಯಾವಳಿಗಳು ಮಣ್ಣಿನ ಕ್ರೀಡಾಂಗಣದಲ್ಲಿ ನಡೆಯುತ್ತವೆ. ಇಲ್ಲಿನ ಸಿಂಥೆಟಿಕ್ ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡಿದ ಆಟಗಾರರಿಗೆ ನೇರವಾಗಿ ಮಣ್ಣಿನ ಕ್ರೀಡಾಂಗಣದಲ್ಲಿ ಆಡುವುದು ಕಷ್ಟ. ಆದ್ದರಿಂದ ಪಂದ್ಯಾವಳಿಗಳು ನಡೆಯುವ ಮುನ್ನ ಮಣ್ಣಿನ ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡಲು ಪರ್ಯಾಯ ಕ್ರೀಡಾಂಗಣ ಸಿದ್ದಗೊಳಿಸಬೇಕು. ಫುಟ್ಬಾಲ್ ಕ್ರೀಡಾಪಟುಗಳಿಗೆ ಸೂಕ್ತ ತರಬೇತಿ ನೀಡಬೇಕು. ಪ್ರೌಢ ಶಾಲೆ, ಪದವಿ ಪೂರ್ವ ಹಾಗೂ ಪದವಿ ಹಂತದಲ್ಲೇ ಕೋಚ್‌ಗಳಿಂದ ತರಬೇತಿ ಕೊಡಿಸಬೇಕು ಎಂಬುದು ಕ್ರೀಡಾಪಟುಗಳ ಒತ್ತಾಯವಾಗಿದೆ.

ಮಾಜಿ ಸಚಿವರ ತವರು ಕ್ರೀಡಾಂಗಣ : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಚಿವರಾದ ವೇಳೆ ಶಾಸಕ ಬಿ. ನಾಗೇಂದ್ರ ಫುಟ್ಬಾಲ್ ಮೈದಾನ ಸೇರಿದಂತೆ ವಿವಿಧ ಕ್ರೀಡಾಂಗಣಗಳನ್ನು ದುರಸ್ತಿಗೊಳಿಸುವ ಭರವಸೆ ಮೂಡಿಸಿದ್ದರು. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಜೈಲು ಸೇರಿದ ಬಳಿಕ ಸಂಪೂರ್ಣವಾಗಿ ಜಿಲ್ಲೆಯ ಕ್ರೀಡಾಂಗಣಗಳೇ ಅಭಿವೃದ್ಧಿ ಮರಿಚೀಕೆಯಾಗಿದೆ. ಅಲ್ಲದೆ, ಇತ್ತೀಚೆಗೆ ವಿಭಾಗ, ಜಿಲ್ಲಾ ಹಾಗೂ ತಾಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸದೆ ವಿಜೇತರಿಗೆ ಕಳಪೆ ಗುಣಮಟ್ಟದ ಶಿಲ್ಡ್, ಕಪ್, ಪದಕಗಳು ಹಾಗೂ ಕ್ರೀಡಾಪಟುಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸದೆ ಇರುವುದು ಕ್ರೀಡಾಪುಟಗಳು ಅಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ, ಕ್ರೀಡಾಪುಟಗಳಿಗೆ ಪ್ರಯಾಣದ ಭತ್ಯೆ ನೀಡಿಲ್ಲ ಎಂದು ಕೆಲವರು ಅಳಲು ತೋಡಿಕೊಂಡರು.

ಕೋಟ… ಜಿಲ್ಲೆಯ ಫುಟ್ಬಾಲ್ ಮೈದಾನ ದುರಸ್ತಿ ಕೈಗೊಳ್ಳುವುದರ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಬಿಡುಗಡೆಗೊಂಡ ಬಳಿಕ ಕ್ರಮವಹಿಸಲಾಗುವುದು.

  • ಡಾ. ಕೆ. ಗ್ರೇಸಿ, ನಿರ್ದೇಶಕಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬಳ್ಳಾರಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net