ದುಪ್ಪಟ್ಟು ಬೆಲೆಗೆ ಜೋಳ ಬೀಜ ಮಾರಾಟ

Published on

ಬಳ್ಳಾರಿ : ಇಲ್ಲಿನ ಜೋಳ ಬೀಜ ಮಾರಾಟ ಮಳಿಗೆಗಳಲ್ಲಿ ಹೈಟೆಕ್ ಸೀಡ್ಸ್ 3201 ತಳಿಯ ಜೋಳದ ಪ್ಯಾಕೆಟ್ ನಿಗದಿತ ಬೆಲೆಗಿಂತ ಅಧಿಕ ಬೆಲೆಗೆ ಮಾರಾಟ ಮಾಡಿದರೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸಿಲ್ಲ ಎಂದು ರೈತರು ಶುಕ್ರವಾರ ಅಕ್ರೋಶ ಹೊರಹಾಕಿದರು.
ನಗರದ ಕೆಸಿ ರಸ್ತೆಯಲ್ಲಿ ಕೆಲ ಬೀಜ ಮಾರಾಟ ಮಳಿಗೆಗಳ ಮುಂಭಾಗದಲ್ಲಿ ಬಿಳಿ ಜೋಳ ಖರೀದಿಗಾಗಿ ರೈತರು ಬೆಳ್ಳಗೆಯಿಂದ ಸಂಜೆಯವರೆಗೆ ಸರತಿಯಲ್ಲಿ ಕಾದರೂ ಸಿಗುತ್ತಿಲ್ಲ. ಮಳಿಗೆಗಳ ಮಾಲೀಕರು ಮಾತ್ರ ರಾಜಕೀಯ ಮುಖಂಡರ, ಪೊಲೀಸ್ ಅಧಿಕಾರಿಗಳ ಹಾಗೂ ಮಾಲೀಕರಿಗೆ ಸಂಬಂಧಿಸಿದವರಿಗೆ ಮಾತ್ರ ಬೀಜಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ರೈತರು ಆರೋಪಿಸಿದರು. ಅಲ್ಲದೆ, ಕೆಲ ಕೃಷಿ ಅಧಿಕಾರಿಗಳು ನೇರವಾಗಿ ಮಳಿಗೆಗಳಿಗೆ ಹೋಗಿ ಅವರಿಗೆ ಸಂಬಂಧಿಸಿದವರಿಗೆ ಬೀಜಗಳನ್ನು ಖರೀದಿಸಿ ನೀಡುತ್ತಿದ್ದಾರೆ. ಮಳಿಗೆಗಳ ದಾಸ್ತಾನು ಮಾಹಿತಿ ಫಲಕದಲ್ಲಿನ ಬೆಲೆ ನಮೂಸಿದೆ ಬೀಜ ಮಾರಾಟ ಮಾಡುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಪೊಲೀಸರು ನೇರವಾಗಿ ಮಳಿಗೆಗಳಿಗೆ ಭೇಟಿ ನೀಡಿದರೂ ಕೂಡ ಯಾವುದೇ ಕ್ರಮವಹಿಸಿಲ್ಲ. ಅಲ್ಲದೆ, ನೇರವಾಗಿ ಗೋದಾಮುನಿಂದ ತಂದು ರಶೀದಿ ನೀಡದೆ ಬೀಜಗಳನ್ನು ನೀಡುತ್ತಿದ್ದಾರೆ. ರಶೀದಿ ಏಕೆ ನೀಡುತ್ತಿಲ್ಲ ಎಂದು ರೈತರು ಪ್ರಶ್ನಿಸಿದರೆ, ಜೋಳ ಬೀಜ ಬೇಕಾ ಅಥವಾ ಬಿಲ್ ಬೇಕಾ ಎಂದು ಮಾಲೀಕರು ದಮ್ಕಿ ಹಾಕುತ್ತಿದ್ದಾರೆ ಎಂದು ಜಿಲ್ಲೆಯ ರೈತ ಗಾದಿಲಿಂಗನಗೌಡ ತಿಳಿಸಿದರು.

ಕೊಟ್…. ಈಗಾಗಲೇ ಬೀಜ ವಿತರಕರನ್ನು ಕರೆಸಿ ಎಚ್ಚರಿಕೆ ನೀಡಲಾಗಿದೆ. ನಿಗದಿತ ಬೆಲೆಗಿಂತ ಅಧಿಕ ಬೆಲೆಗೆ ಮಾರಾಟ ಮಾಡಿದರೆ ಮಳಿಗೆಗಳಿಗೆ ನೋಟಿಸ್ ನೀಡಿ ಕ್ರಮವಹಿಸಲಾಗುವುದು.- ಸೋಮಸುಂದರ್, ಜಂಟಿ ನಿರ್ದೇಶಕ, ಕೃಷಿ ಇಲಾಖೆ, ಬಳ್ಳಾರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net