

ಜಯತೀರ್ಥ ಪಾಟೀಲ ಕಲಬುರಗಿ
ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಬೇರ್ಪಡಿಸಿ ರಾಯಚೂರಿನಲ್ಲಿ ಪ್ರತ್ಯೇಕ ವಿವಿ ಸ್ಥಾಪಿಸುವ ಬಗ್ಗೆ ಅಧಿಕೃತ ಘೋಷಣೆ ಆಗಿದೆ. ಆದರೆ ಅನುದಾನ ಕೊರತೆಯಿಂದಾಗಿ ವಿವಿ ಚಟುವಟಿಕೆ ಬಹುತೇಕ ಸ್ಥಗಿತಗೊಂಡಿದೆ. ಈ ಮಧ್ಯೆ ಸರ್ಕಾರ ಸುತ್ತೋಲೆ ಹೊರಡಿಸಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ರಾಯಚೂರು ವಿವಿ ಮೂಲಕ ತರಗತಿ ಪ್ರಾರಂಭಿಸಬೇಕೆಂದು ಸೂಚಿಸಿರುವುದು ಅಚ್ಚರಿ ಮೂಡಿಸಿದೆ.
ರಾಯಚೂರು ಪ್ರತ್ಯೇಕ ವಿಶ್ವವಿದ್ಯಾಲಯದ ಹಣಕಾಸಿನ ವ್ಯವಹಾರ ಗುಲ್ಬರ್ಗ ವಿವಿ ಮೂಲಕವೇ ನಡೆಯುತ್ತಿತ್ತು. ಆರಂಭದಲ್ಲಿ ಸರ್ಕಾರ 2.5 ಕೋಟಿ ರೂ. ಒದಗಿಸಿದ್ದನ್ನು ಹೊರತುಪಡಿಸಿದರೆ ಈವರೆಗೆ ನೈಯಾಪೈಸೆ ನೀಡಿಲ್ಲ. ಅನುದಾನ ಒದಗಿಸದ ಸರ್ಕಾರದ ಧೋರಣೆಗೆ ಕಲ್ಯಾಣ ಕರ್ನಾಟಕದ ಜನ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ನೂತನ ವಿವಿಯಲ್ಲಿ ಕುಡಿಯುವ ನೀರು ಬಿಟ್ಟರೆ ಇನ್ಯಾವ ಸೌಲಭ್ಯ ಇಲ್ಲ. ಚಟುವಟಿಕೆಗಳೂ ನಡೆಯುತ್ತಿಲ್ಲ. ಹೀಗಾಗಿ ವಿವಿ ಆರಂಭವಾಗುವ ಪ್ರಕ್ರಿಯೆ ವಿಳಂಬವಾಗುವ ಸಾಧ್ಯತೆ ಹೆಚ್ಚಾಗಿದೆ.
ಮೂಲಸೌಲಭ್ಯವೂ ಇಲ್ಲ
ರಾಯಚೂರಿನ ಯರಗೇರಾ ರಸ್ತೆಯಲ್ಲಿ ಗುಲ್ಬರ್ಗ ವಿವಿ ಸ್ನಾತಕೋತ್ತರ ಕೇಂದ್ರವಿದ್ದು, ಆಡಳಿತ ಕಟ್ಟಡ, ಮಹಿಳಾ ವಸತಿನಿಲಯ ಸೇರಿ ಎರಡು ಕಟ್ಟಡಗಳಿವೆ. ಆದರೆ ವಿಶ್ವವಿದ್ಯಾಲಯಕ್ಕೆ ಇದು ಯಾತಕ್ಕೂ ಸಾಲದು. ಕಟ್ಟಡ, ಪ್ರಯೋಗಾಲಯ, ಪೀಠೋಪಕರಣ, ಗ್ರಂಥಾಲಯ ಸೇರಿ ಅಗತ್ಯ ಮೂಲಸೌಲಭ್ಯಕ್ಕೆ ವ್ಯವಸ್ಥೆ ಮಾಡಬೇಕಿದೆ. ಪ್ರತ್ಯೇಕ ವಿವಿ ಸ್ಥಾಪನೆ ಪ್ರಕ್ರಿಯೆ ಶುರು ಮಾಡಲು ವಿಶೇಷಾಧಿಕಾರಿಯನ್ನು ಸರ್ಕಾರ ನೇಮಕ ಮಾಡಿದೆ. ಆದರೆ ಹಣ ಇಲ್ಲದೆ ವಿಶೇಷಾಧಿಕಾರಿಯೂ ಕೈಕಟ್ಟಿ ಕುಳಿತುಕೊಳ್ಳಬೇಕಾದ ಸ್ಥಿತಿ ತಲೆದೋರಿದೆ.
ಪ್ರಕ್ರಿಯೆಯಲ್ಲಿ ತೊಡಕು: ಪ್ರಸಕ್ತ ರಾಯಚೂರು ಮತ್ತು ಯಾದಗಿರಿ ಜಿಲ್ಲೆ ಗುಲ್ಬರ್ಗ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿದ್ದು, ಈ ಎರಡೂ ಜಿಲ್ಲೆಗಳಲ್ಲಿ ಸುಮಾರು 180 ಕಾಲೇಜುಗಳಿವೆ. ಪ್ರವೇಶ, ಪರೀಕ್ಷೆ ಸೇರಿ ಕೋಟ್ಯಂತರ ರೂಪಾಯಿ ಶುಲ್ಕ ಬಾಕಿ ಈ ಕಾಲೇಜುಗಳಿಂದ ಬರಬೇಕಿದೆ. ಪ್ರತ್ಯೇಕ ವಿವಿ ಆರಂಭಕ್ಕೂ ಮುನ್ನ ಗುಲ್ಬರ್ಗ ವಿವಿಗೆ ಶುಲ್ಕ ಬಾಕಿ ಸಂದಾಯವಾಗಬೇಕು.
ಈ ಎಲ್ಲ ಕಾಲೇಜುಗಳಿಗೆ ಗುಲ್ಬರ್ಗ ವಿವಿ ಸಂಲಗ್ನತೆ (ಅಫಿಲಿಯೇಶನ್) ನೀಡಿದ್ದು, ಇದರ ಅವಧಿ ಪೂರ್ಣಗೊಂಡಿಲ್ಲ. ಒಂದು ವಿವಿಯಿಂದ ಮತ್ತೊಂದು ವಿವಿಗೆ ಕಾಲೇಜುಗಳು ವರ್ಗಾವಣೆ ಆಗಬೇಕಾದರೆ ಅಫಿಲಿಯೇಶನ್ ಅವಧಿ ಮುಗಿಯಬೇಕು. ಶುಲ್ಕ ಬಾಕಿ ವಸೂಲಿ ಪ್ರಕ್ರಿಯೆ ಪೂರ್ಣಗೊಳ್ಳಬೇಕು. ಈ ಎಲ್ಲ ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ದೊರೆತ ನಂತರವೇ ರಾಯಚೂರು ವಿವಿಗೆ ಕ್ಲಿಯರೆನ್ಸ್ ದೊರೆಯಲಿದೆ. ಹೀಗಾಗಿ ಪ್ರಕ್ರಿಯೆ ವಿಳಂಬವಾಗುವ ಸಾಧ್ಯತೆ ಇದೆ.
ಜಿಲ್ಲೆಗೊಂದು ವಿವಿ ಮಾಡುವುದಾಗಿ ಹಿಂದಿನ ಸರ್ಕಾರ ಹೇಳಿತ್ತು. ಈಗ ಘೋಷಣೆಯಾಗಿರುವ ರಾಯಚೂರು ವಿವಿಗೆ ಅನುದಾನ ಒದಗಿಸುವ ಮೂಲಕ ಪ್ರಕ್ರಿಯೆ ಚುರುಕುಗೊಳಿಸುವ ಅಗತ್ಯವಿದೆ. ಈ ಮೂಲಕ ವಿದ್ಯಾರ್ಥಿಗಳ ಗೊಂದಲಕ್ಕೂ ತೆರೆ ಎಳೆಯಬೇಕಿದೆ.
ವಸ್ತುಸ್ಥಿತಿ ಕುರಿತು ರಾಜ್ಯ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದು ಗಮನಕ್ಕೆ ತರಲಾಗಿದೆ. ಜತೆಗೆ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ವಿಂಗಡಣೆಗೂ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೊರಲಾಗಿದೆ. ಕೆಲ ತಾಂತ್ರಿಕ ತೊಂದರೆಗಳಿಂದಾಗಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ತರಗತಿ ಆರಂಭವಾಗುವುದು ಕಷ್ಟಸಾಧ್ಯ.
| ಪ್ರೊ.ಕೊಟ್ರೇಶಪ್ಪ
ವಿಶೇಷಾಧಿಕಾರಿ, ರಾಯಚೂರು ವಿವಿ