ದುಡಿಯುವ ಹೆಣ್ಣು ಮಕ್ಕಳ ಶೋಷಣೆ

mysore
Published on

ಮೈಸೂರು

ದುಡಿಯುವ ಹೆಣ್ಣುಮಕ್ಕಳಿಗೆ ಜೀವನದ ಭದ್ರತೆ ಕಲ್ಪಿಸದೆ ಅವರನ್ನು ಶೋಷಿಸಲಾಗುತ್ತಿದೆ. ಇದಕ್ಕೆ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಮಹಿಳೆಯರು ಜೀವಂತ ಸಾಕ್ಷಿ ಎಂಬ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ಜಿಲ್ಲಾ ಸಮಿತಿಯ ಉಪಾಧ್ಯಕ್ಷೆ ಶೀಭಾ ಹೇಳಿದರು.

ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ವತಿಯಿಂದ ನಟರಾಜ ವಿದ್ಯಾಸಂಸ್ಥೆಯ ಟೈಲರಿಂಗ್ ವಿಭಾಗದಲ್ಲಿ ಶನಿವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದರು.

1908ರಲ್ಲಿ ಅಮೆರಿಕದ ನ್ಯೂಯಾರ್ಕ್ ನಗರದ ಜವಳಿ ಕಾರ್ಖಾನೆಯ ಹೆಣ್ಣುಮಕ್ಕಳು ಲಾಟಿ-ಗುಂಡಿನೇಟು ಎದುರಿಸಿ ತಮ್ಮ ಕೆಲವೊಂದು ಹಕ್ಕುಗಳನ್ನು ಗೆದ್ದುಕೊಂಡ ಆ ದಿನವೇ 8 ಮಾರ್ಚ್. 1910ರಲ್ಲಿ ಸಮಾಜವಾದಿ ನಾಯಕಿ ಕ್ಲಾರಾ ಜೆಟ್ಕಿನ್ ಅವರು ಇದನ್ನು ಅಂತಾರಾಷ್ಟ್ರೀಯ ಮಹಿಳಾ ದಿನವಾಗಿ ಘೋಷಿಸಿದರು. ಅಂದಿನಿಂದ ಇದು ಮಹಿಳಾ ಹೋರಾಟದ ದಿಕ್ಸೂಚಿಯಾಗಿದೆ. ಮಹಿಳೆಯರು ತಾವು ನಡೆದು ಬಂದ ದಾರಿಯನ್ನು ಅವಲೋಕಿಸುತ್ತಾ ಮುಂದೆ ಸಾಧಿಸಬೇಕಾಗಿರುವ ಗುರಿಯ ರೂಪುರೇಷೆ ನಿರ್ಧರಿಸಲು ಮೀಸಲಿಡಬೇಕಾದ ಪ್ರೇರಣಾ ದಿನವಾಗಿದೆ ಎಂದರು.

ನವೋದಯದ ಹರಿಕಾರರಾದ ರಾಜಾರಾಮ್ ಮೋಹನ್‌ರಾಯ್, ಈಶ್ವರಚಂದ್ರ ವಿದ್ಯಾಸಾಗರ, ಪಂಡಿತ ತಾರಾನಾಥ, ಸಾವಿತ್ರಿಬಾಯಿ ಫುಲೆ ಮುಂತಾದವರ ಹೋರಾಟದ ಫಲವಾಗಿ ಅಲ್ಪಸ್ವಲ್ಪ ಹಕ್ಕುಗಳನ್ನು ಮಹಿಳೆಯರು ಗಳಿಸಿಕೊಂಡಿದ್ದರೂ ಅವರ ಪರಿಸ್ಥಿತಿ ಇನ್ನೂ ಸಂಕಟಮಯವಾಗಿಯೇ ಇದೆ. ಜತೆಗೆ ಜಾಗತೀಕರಣ ನೀತಿ, ಪರಿಸ್ಥಿತಿಯನ್ನು ಇನ್ನಷ್ಟು ವಿಷಮಯಗೊಳಿಸಿದೆ ಎಂದು ಬೇಸರ ಗೊಳಿಸಿದರು.

ಇಂತಹ ಸಂಕಷ್ಟದ ಸಂದರ್ಭದಲ್ಲಿ ಮಹಿಳಾ ದಿನ ಸ್ಫೂರ್ತಿಯ ಬೆಳಕನ್ನು ಹೊತ್ತು ಬರುತ್ತಿದೆ. ಮಹಿಳೆಯರನ್ನು ಹೋರಾಟಕ್ಕೆ ಪ್ರೇರೇಪಿಸುತ್ತಿದೆ. ಮಹಿಳೆಯರು ಸಾಧಿಸಿದ್ದು ಇತಿಹಾಸ, ಮುಂದೆ ಸಾಧಿಸುವುದು ಸಾಮರ್ಥ್ಯ ಎಂದರು.

ಮತ್ತೊಬ್ಬ ಉಪಾಧ್ಯಕ್ಷೆ ಸೀಮಾ ಮಾತನಾಡಿ, ಮಹಿಳಾ ಸಮುದಾಯ ಹೋರಾಟದಿಂದ ಗಳಿಸಿಕೊಂಡಿರುವ ಎಲ್ಲ ರೀತಿಯ ಹಕ್ಕುಗಳನ್ನು ಇಂದು ಉಳಿಸಿಕೊಳ್ಳಬೇಕಿದೆ. ಮಹಿಳೆಯರ ಮತ್ತು ಮಕ್ಕಳ ಜೀವಿಸುವ ಹಕ್ಕಿಗಾಗಿ ನಾವೆಲ್ಲರೂ ಧ್ವನಿ ಎತ್ತಬೇಕಿದೆ. ಹೆಣ್ಣು ಮಕ್ಕಳಿಗೆ ಸರ್ಕಾರವು ಆರೋಗ್ಯ-ಶಿಕ್ಷಣ-ಸುರಕ್ಷತೆ ಮತ್ತು ಆರ್ಥಿಕ ಭದ್ರತೆ ಖಾತ್ರಿಪಡಿಸಬೇಕು. ಇದಕ್ಕಾಗಿ ಮಹಿಳಾ ಸಮುದಾಯ ಒಕ್ಕೂರಲ್ಲಿನಿಂದ ಧ್ವನಿ ಎತ್ತಬೇಕಿದೆ ಎಂದು ಹೇಳಿದರು.

ಮಹಿಳಾ ದಿನಾಚರಣೆಯು ಮಹಿಳೆಯರ ಹಕ್ಕು, ಸಮಾನತೆಗಾಗಿ, ಸಾವಿರಾರು ಮಹಿಳಾ ಕಾರ್ಮಿಕರು ಜೀವತೆತ್ತ ದಿನ. ಇದನ್ನು ಅರ್ಥಪೂರ್ಣವಾಗಿ ಆಚರಿಸಲು ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕು ಎಂದರು.

ನಟರಾಜ ವಿದ್ಯಾಸಂಸ್ಥೆಯ ಟೈಲರಿಂಗ್ ವಿಭಾಗದ ಮುಖ್ಯಸ್ಥೆ ಮಧು, ಸಂಘಟನೆಯ ಜಿಲ್ಲಾ ಅಧ್ಯಕ್ಷೆ ನಳಿನಾ, ಕಾರ್ಯದರ್ಶಿ ಆಸಿಯಾ ಬೇಗಂ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net