ದುಡಿಮೆಯೂ ಇಲ್ಲ, ಅನ್ನವೂ ಇಲ್ಲ

h1- Ashray colany
Published on

ಹುಬ್ಬಳ್ಳಿ: ಲಾಕ್​ಡೌನ್ ನಂತರ ದುಡಿಯುವ ವರ್ಗ ಸಂಕಷ್ಟ ಎದುರಿಸುತ್ತಿದೆ. ಅದರಲ್ಲೂ ಅದೇ ದಿನ ದುಡಿದ ಅಂದಿನ ಹೊಟ್ಟೆ ಹೊರೆಯುತ್ತಿದ್ದ ದಿನಗೂಲಿಗಳು ಬಹುತೇಕ ಉಪವಾಸ, ವನವಾಸ ಅನುಭವಿಸುತ್ತಿದ್ದಾರೆ.

ಮನೆ ಬಿಟ್ಟು ಹೊರಬಂದರೆ ಪೊಲೀಸರು ಹೊಡೆಯುತ್ತಾರೆ, ಮನೆಯಲ್ಲಿ ನೋಡಿದರೆ ಹಿಡಿ ಅಕ್ಕಿ, ಬೇಳೆ, ಎಣ್ಣೆ ಯಾವುದೂ ಇಲ್ಲ, ಅಡುಗೆ ಮಾಡಿಕೊಂಡು ತಿನ್ನುವುದಾದರೂ ಹೇಗೆ? ಅಲ್ಲಿ ಇಲ್ಲಿ ಒಂದಿಷ್ಟು ಹಣ ತೆಗೆದುಕೊಂಡು ಅಂಗಡಿಗೆ ಹೋಗೋಣ ಎಂದರೆ ಎಲ್ಲಿಯೂ ದಿನಸಿ ಸಿಗುತ್ತಿಲ್ಲ…

ಇದು ಹುಬ್ಬಳ್ಳಿ- ಧಾರವಾಡ ಅವಳಿನಗರದ ದುಡಿಯುವ ವರ್ಗ ವಾಸವಾಗಿರುವ ಆಶ್ರಯ ಕಾಲನಿಗಳ ಸದ್ಯದ ಸ್ಥಿತಿಯಾಗಿದೆ.

ಹೌದು. ಇಲ್ಲಿಯ ಅಮರಗೋಳ ಮಹಾತ್ಮ ಗಾಂಧಿ ಆಶ್ರಯ ಕಾಲನಿ ನಿವಾಸಿಗಳು ಹೊಟ್ಟೆಗೆ ಹಿಟ್ಟಿಲ್ಲದೇ ವಾರದಿಂದ ಪರದಾಡುತ್ತಿದ್ದಾರೆ. ಇದುವರೆಗೂ ನೀರು ಕುಡಿದು ಬದುಕು ಸಾಗಿಸಿದ್ದ ಎಷ್ಟೋ ಜನರು ಇನ್ನು ಸಾಧ್ಯವಿಲ್ಲ ಎಂದು ಮನೆಯಿಂದ ಹೊರ ಬರುವ ಪ್ರಯತ್ನ ನಡೆಸುತ್ತಿದ್ದಾರೆ.

ಗಂಡಂದಿರಿಗೂ ಕೆಲಸವಿಲ್ಲ, ಕೂಲಿ ಮಾಡಲು ಹೋಗುತ್ತಿದ್ದ ಮಹಿಳೆಯರೂ ಮನೆ ಹಿಡಿದು ಕುಳಿತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಗಂಡ- ಹೆಂಡತಿ, ಮನೆಯಲ್ಲಿನ ಮಕ್ಕಳು, ಮರಿ ಎಲ್ಲರಿಗೂ ಉಪವಾಸ ಅನಿವಾರ್ಯವಾಗಿದೆ ಎಂದು ಹಲವರು ಅಳಲು ತೋಡಿಕೊಂಡಿದ್ದಾರೆ.

ಒಂದು ವಾರ ಆತ್ರಿ, ನಾವೆಲ್ಲ ಉಪವಾಸ ಬಿದ್ದೇವಿ, ಹೆಂಗದರಿ ಅಂತ ಕೇಳಾಕ್ ಯಾರೂ ಬಂದಿಲ್ಲ. ವಾರಕ್ಕೊಮ್ಮೆ ನೀರು ಬಿಡತಾರ್ರಿ, ಅವನ್ ಕುಡಿದು ಕುಂದ್ರುದ್ ಆಗೇತ್ರಿ ಎಂದು ಕಾಲನಿ ನಿವಾಸಿಗಳು ಹೇಳುತ್ತಾರೆ.

ತಿನ್ನಲು ಮನೆಯಲ್ಲಿ ಏನೂ ಇಲ್ರಿ, ಇನ್ನಾದರೂ ಸರ್ಕಾರ, ಜಿಲ್ಲಾಡಳಿತ ನಮ್ಮ ಗೋಳು ಕೇಳಿ, ಒಂದಿಷ್ಟು ರೇಶನ್ ವ್ಯವಸ್ಥೆ ಮಾಡಬೇಕು, ನಮ್ಮ ಮಕ್ಕಳು, ಮರಿ ಬದುಕಿಸಿಕೊಳ್ಳಲು ನೆರವಾಗಬೇಕು ಎಂದು ಆಶ್ರಯ ಕಾಲನಿಯ ನಿವಾಸಿಗಳಾದ ಪುಷ್ಪಾ ಚನ್ನಪ್ಪನವರ, ಸಹನಾ ಜಾಂಬೋಟಿಕರ, ಅನಸಮ್ಮ ಬಿಜಾಪುರ, ಸುರೇಖಾ ಕುಸಮ್ಮನವರ, ಕಲ್ಲಮ್ಮ ಗಿರಿಜಮ್ಮನವರ, ನೀಲವ್ವ ಸುಣಗಾರ ಸೇರಿ ಹತ್ತಾರು ಜನರು ಅಳಲು ತೋಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net