

ಬೆಳಗಾವಿ: ಶರಣರ ಜೀವನದಂತೆ ಕಾಯಕವೇ ಕೈಲಾಸವೆಂದು ಭಾವಿಸಿ ನಿಷ್ಠೆಯಿಂದ ದುಡಿದರೆ ಜೀವನದ ಜಂಜಾಟಗಳಿಂದ ಪಾರಾಗಿ ನೆಮ್ಮದಿಯ ಬದುಕು ಸಾಗಿಸಬಹುದು ಎಂದು ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಹೇಳಿದರು.
ನಗರದ ಫ.ಗು.ಹಳಕಟ್ಟಿ ಭವನದಲ್ಲಿ ಲಿಂಗಾಯತ ಸಂಘಟನೆಯಿಂದ ಆಯೋಜಿಸಿದ್ದ ಹಡಪದ ಅಪ್ಪಣ್ಣನವರ ಜಯಂತಿ ಮತ್ತು ಸತ್ಸಂಗ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ಸೇವಾ ಮನೋಭಾವ, ಸತ್ಸಂಗಗಳು ಕೂಡ ಜೀವನವನ್ನು ಪಾವನಗೊಳಿಸುತ್ತವೆ. ಭಾರತೀಯ ಸಂಸ್ಕೃತಿ ಉಳಿಸಿ, ಬೆಳೆಸುವ ಕಾರ್ಯ ಆಗಬೇಕು. ತಂದೆ-ತಾಯಿಯ ಸೇವೆ ಮಾಡುವುದರ ಜತೆಗೆ ಸಮಾಜಕ್ಕೆ ಕಾಣಿಕೆ ನೀಡಬೇಕು ಎಂದರು. ಶರಣ ಹಡಪದ ಅಪ್ಪಣ್ಣನವರ ಜಯಂತಿ ನಿಮಿತ್ತ ಜಿ.ಎ. ಕಾಲೇಜಿನ ಉಪನ್ಯಾಸಕ ಎಂ.ಎಚ್. ಮಾರದ ಮಾತನಾಡಿ, ಕಾಯಕದಲ್ಲಿ ನೋಡಿ ಮೇಲು-ಕೀಳು ಎಂದು ಭಾವಿಸಬಾರದು. ಕಾಯಕ ಯಾವುದೇ ಆಗಿರಲಿ ವ್ಯಕ್ತಿಯಲ್ಲಿ ನಿಷ್ಠೆ ಮಹತ್ವದ್ದು. ಆ ನಿಟ್ಟಿನಲ್ಲಿ 12ನೇ ಶತಮಾನದಲ್ಲಿ ಬಸವಣ್ಣನವರು ಹಡಪದ ಅಪ್ಪಣ್ಣನವರನ್ನೇ ತಮ್ಮ ಕಾರ್ಯದರ್ಶಿಯನ್ನಾಗಿ ನೇಮಿಸಿಕೊಂಡರು. ಇಂತಹ ಸಾಮಾಜಿಕ ನ್ಯಾಯ ಈಗಲೂ ಸಿಗಬೇಕು ಎಂದರು.
ಉದ್ಯಮಿ ರುದ್ರಣ್ಣ ಚಂದರಗಿ ಮಾತನಾಡಿ, ಗುರುವಿನ ಆಶೀರ್ವಾದ ಬಲದಿಂದ ನಾವು ಉತ್ತಮ ವ್ಯಕ್ತಿ ಆಗುವ ಜತೆಗೆ ಸಮಾಜಕ್ಕೆ ಶಕ್ತಿ ಆಗಬಹುದು ಎಂದರು. ದಿನೇಶ ಪಾಟೀಲ, ರುದ್ರಣ್ಣ ಚಂದರಗಿ ಮತ್ತು ಸತೀಶ ಪಾಟೀಲ ಅವರನ್ನು ಸತ್ಕರಿಸಲಾಯಿತು. ಯೋಗ ಮತ್ತು ಈಜು ಸ್ಪರ್ಧೆಯಲ್ಲಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ ಲಕ್ಷ್ಮಣ ಕುಂಬಾರ ದಂಪತಿಯನ್ನು ಅವರ ವಿವಾಹದ 50ನೇ ವಾರ್ಷಿಕೋತ್ಸವದ ನಿಮಿತ್ತ ಸತ್ಕರಿಸಲಾಯಿತು. ಲಿಂಗಾಯತ ಸಂಘಟನೆ ಅಧ್ಯಕ್ಷ ಈರಣ್ಣ ದೇಯಣ್ಣವರ, ಸಂಗಮೇಶ ಅರಳಿ, ಶಶಿಭೂಷಣ ಪಾಟೀಲ, ಶಂಕರ ಗುಡಸ, ಸದಾಶಿವ ದೇವರಮನಿ, ಸಂಜಯ ಭಾವಿ, ಬಿ.ಎಂ. ತಿಗಡಿ, ಜ್ಯೋತಿ ಬದಾಮಿ, ಎಂ.ವೈ. ಮೆಣಸಿನಕಾಯಿ, ಶಿವಾನಂದ ತಲ್ಲೂರ ಇದ್ದರು.