ದುಂದು ವೆಚ್ಚಕ್ಕೆ ಸಾಮೂಹಿಕ ವಿವಾಹ ಕಡಿವಾಣ

CTD MURUGA
Published on

ಚಿತ್ರದುರ್ಗ: ದುಂದು ವೆಚ್ಚಕ್ಕೆ ಕಡಿವಾಣ ಹಾಕಲು ಸಾಮೂಹಿಕ ಕಲ್ಯಾಣಗಳು ಹೆಚ್ಚಾಗಬೇಕೆಂದು ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಡಾ. ಶ್ರೀ ಬಸವಕುಮಾರ ಸ್ವಾಮೀಜಿ ಹೇಳಿದರು.
ಶ್ರೀ ಮಠದಲ್ಲಿ ಸೋಮವಾರ 34 ನೇ ವರ್ಷದ 8 ನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ನೇತೃತ್ವ ವಹಿಸಿ ಮಾತನಾಡಿ, ಅಂಬೇಡ್ಕರ್, ಮಹಾತ್ಮ ಗಾಂಧೀಜಿ ಮತ್ತಿತರ ದಾರ್ಶನಿಕರು ಸಾಮೂಹಿಕ ವಿವಾಹಕ್ಕೆ ಉತ್ತೇಜನ ನೀಡಿದ್ದಾರೆ ಎಂದರು.
ಕೋಟ್ಯಂತರ ರೂ. ಖರ್ಚು ಮಾಡುವ ಮದುವೆಗಳಲ್ಲಿ ಹಸಿದ ಹೊಟ್ಟೆಗಳಿಗಿಂತ ತುಂಬಿದ ಹೊಟ್ಟೆಗಳನ್ನು ತುಂಬಿಸುವ ಕೆಲಸ ನಡೆಯುತ್ತದೆ. ಶ್ರೀಮಠ ಬಡವರ ಪರವಾಗಿದೆ. ಇಲ್ಲಿಯ ಜಗದ್ಗುರುಗಳು ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಬಯಲುಸೀಮೆ ನಾಡಿನ ಈ ಮಠದಲ್ಲಿ ಪ್ರೀತಿ ಇದೆ. ಅನ್ನ, ಜ್ಞಾನ ದಾಸೋಹ ನಡೆಯುತ್ತಿದೆ. ದಂಪತಿಗಳಲ್ಲಿ ಪರಸ್ಪರ ಹೊಂದಾಣಿಕೆ ಮುಖ್ಯ. ಪ್ರೀತಿ ಇಲ್ಲದ ಬದುಕು ಅರ್ಥವಿಲ್ಲದ್ದು. ಪರಸ್ಪರ ಅರ್ಥ ಮಾಡಿಕೊಳ್ಳುವಲ್ಲಿ ದಂಪತಿ ಸೋಲಬಾರದು. ಕಷ್ಟಗಳನ್ನು ಎದುರಿಸಿ ಸಂಸಾರದ ಬಂಡಿ ಪ್ರೀತಿಯಿಂದ ಎಳೆಯಬೇಕು ಎಂದು ತಿಳಿಸಿದರು.
ದಾವಣಗೆರೆ ವಿವಿ ಪ್ರಾಧ್ಯಾಪಕ ಪ್ರೊ.ಪಾಲಾಟೆ ವೆಂಕಟರಾವ್ ಮಾತನಾಡಿ, 12ನೇ ಶತಮಾನದ ಆಶೋತ್ತರಗಳನ್ನು ಶ್ರೀಮಠ ಆಚರಿಸುತ್ತಿದೆ. ಯಾವುದೇ ಜಾತಿಭೇದವಿಲ್ಲದೆ ವಿವಾಹಗಳು ನಡೆಯುತ್ತಿರುವುದು ಪ್ರೀತಿಯ ದ್ಯೋತಕವಾಗಿದೆ. ನಿರಂತರವಾಗಿ ಸಾಮೂಹಿಕ ಕಲ್ಯಾಣ ಮಹೋತ್ಸವ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.
ದಾವಣಗೆರೆ ವಿರಕ್ತ ಮಠದ ಡಾ. ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ದೇಹ ಎರಡಾದರೂ ಮನಸ್ಸು ಒಂದೇ ರೀತಿ ಇರಬೇಕು. ಸಂಸಾರದಲ್ಲಿ ನೆಮ್ಮದಿ ಬೇಕು ಎಂದು ತಿಳಿಸಿದರು.
ಸಂಪತ್ತಿದ್ದ ಮಾತ್ರಕ್ಕೆ ಸಾಂಸಾರಿಕ ಬದುಕು ಸುಧಾರಿಸುವುದಿಲ್ಲ. ಸತಿ-ಪತಿ ಪ್ರೀತಿಯಿಂದ ಕೊನೆಯವರೆಗೆ ಇರಬೇಕು. ಪ್ರೀತಿಗೆ ಬಡತನವಿರಬಾರದು. ಸಂಸಾರದಲ್ಲಿ ಸುಖ ದುಃಖ ಬರುವುದು ಸಾಮಾನ್ಯ. ಯಾವ ದಿನವೂ ಶ್ರೇಷ್ಠ, ಕನಿಷ್ಠವಲ್ಲ. ಎಲ್ಲ ದಿನವೂ ಶ್ರೇಷ್ಠವೆನ್ನುವ ಮಾತಿಗೆ ಶ್ರೀಮಠ ಸಾಕ್ಷಿಯಾಗಿದೆ. ವೈಚಾರಿಕ ಮಂತ್ರ ಮಾಂಗಲ್ಯ ನಡೆಯುತ್ತಿದೆ ಎಂದರು.
4 ಜೋಡಿಗಳು ದಾಂಪತ್ಯ ಜೀವನ ಪ್ರವೇಶಿದವು. ಪೈಲ್ವಾನ್ ತಿಪ್ಪೇಸ್ವಾಮಿ ಮತ್ತಿತರರು ಇದ್ದರು. ಜಮುರಾ ಕಲಾವಿದರು ಪ್ರಾರ್ಥಿಸಿದರು. ವೀರಭದ್ರಪ್ಪ ಸ್ವಾಗತಿಸಿದರು. ಟಿ.ಪಿ.ಜ್ಞಾನಮೂರ್ತಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net