ದೀರ್ಘಾವಧಿ ಸಾಲ ವಸೂಲಿಗೆ ಖಂಡನೆ

basavarajappa
Published on

ಶಿವಮೊಗ್ಗ: ಸಹಕಾರ ಸಂಸ್ಥೆಗಳಿಂದ ರೈತರ ದೀರ್ಘಾವಧಿ ಸಾಲ ವಸೂಲಿಗೆ ಹೊರಡಿಸಿರುವ ಸುತ್ತೋಲೆ ಹಿಂಪಡೆಯದಿದ್ದರೆ ಪ್ರತಿಭಟನೆ ಅನಿವಾರ್ಯ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ಎಚ್ಚರಿಕೆ ನೀಡಿದರು.

ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ರಾಜ್ಯದ ಜನತೆ ಕಂಗಾಲಾಗಿದ್ದಾರೆ. ಈ ಸಂದರ್ಭದಲ್ಲಿ ಸಾಲ ವಸೂಲಾತಿಗೆ ಮುಂದಾಗಿರುವುದು ಸರಿಯಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಾಲ ವಸೂಲಾತಿ ಮಾಡಲು ಸರ್ಕಾರಕ್ಕೆ ನೈತಿಕತೆ ಇಲ್ಲ. ಅತಿವೃಷ್ಟಿಯಿಂದ ರೈತರು ಮನೆ ಮಠ ಕಳೆದುಕೊಂಡಿದ್ದಾರೆ. ಬೆಳೆ ನಾಶವಾಗಿ ಜಮೀನುಗಳೇ ಕೊಚ್ಚಿ ಹೋಗಿವೆ. ಇದರ ಸಂಪೂರ್ಣ ನಷ್ಟ ಭರಿಸಲು ಸರ್ಕಾರದಿಂದ ಇನ್ನೂ ಸಾಧ್ಯವಾಗಿಲ್ಲ. ರೈತರ ಬೆಳೆಗಳಿಗೆ ನ್ಯಾಯಯುತ ಬೆಲೆ ಸಿಕ್ಕಿಲ್ಲ ಎಂದು ದೂರಿದರು.

ಹಿಂದಿನ ಸಿಎಂ ಸಿದ್ದರಾಮಯ್ಯ ಅವರು ರಾಜ್ಯ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್​ನ ದೀರ್ಘಾವಧಿ ಸಾಲಗಳಿಗೆ ಅಸಲು ಪಾವತಿಸಿದರೆ ಬಡ್ಡಿ ಮನ್ನಾ ಮಾಡುವುದಾಗಿ ಆದೇಶ ಹೊರಡಿಸಿದ್ದರು. ಆದರೂ ರೈತರಿಗೆ ಅಸಲು ಕಟ್ಟಲು ಸಾಧ್ಯವಾಗಿಲ್ಲ. ಬಳಿಕ 50 ಸಾವಿರ ರೂ. ಹಾಗೂ ಕುಮಾರಸ್ವಾಮಿ ಸಿಎಂ ಆಗಿದ್ದಾಗ 1 ಲಕ್ಷ ರೂ. ಸಾಲ ಮನ್ನಾ ಮಾಡಿದ್ದಾರೆ. ಆದರೆ ಇದೀಗ ಅಸಲು ಮತ್ತು ಬಡ್ಡಿ ಸಮೇತ ಸಾಲ ವಸೂಲಿ ಮಾಡಲು ಆದೇಶ ನೀಡಿರುವುದು ರೈತ ವಿರೋಧಿ ನೀತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ರೈತರ ಸಾಲ ಮನ್ನಾ ಮಾಡಬೇಕು. ಇಲ್ಲವಾದಲ್ಲಿ ಪ್ರತಿಭಟನೆ ಅನಿವಾರ್ಯವಾಗಲಿದೆ. ಟ್ರಾಕ್ಟರ್, ಪವರ್ ಟಿಲ್ಲರ್ ಜಪ್ತಿ ಮಾಡಿದರೆ ರೈತ ಸಂಘದಿಂದ ಮರು ಜಪ್ತಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ರಾಜ್ಯ ಉಪಾಧ್ಯಕ್ಷ ಹಿಟ್ಟೂರು ರಾಜು, ಜಿಲ್ಲಾಧ್ಯಕ್ಷ ಎಸ್.ಶಿವಮೂರ್ತಿ, ಕಾರ್ಯಾಧ್ಯಕ್ಷ ಡಿ.ಎಚ್.ರಾಮಚಂದ್ರಪ್ಪ, ಕೆ.ರಾಘವೇಂದ್ರ, ಪಿ.ಶೇಖರಪ್ಪ, ಪಿ.ಡಿ.ಮಂಜಪ್ಪ, ಸಿ.ಚಂದ್ರಪ್ಪ ಸುದ್ದಿಗೋಷ್ಠಿಯಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net